ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರ ಮನೆ ಸಮೀಪದ ನಿವೇಶನದ ಮಾಲೀಕತ್ವ ವಿಚಾರ ಇಂದು ತಾರಕಕ್ಕೇರಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಇಂದು ಬೆಳಿಗ್ಗೆಯಿಂದಲೇ ನಿವೇಶನದ ಸುತ್ತ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಪುಷ್ಪಾ ಖುದ್ದಾಗಿ ಸ್ಥಳದಲ್ಲೇ ನಿಂತು ಕೆಲಸ ನಡೆಸಿಸುತ್ತಿದ್ದರು. ಈ ವೇಳೆ ನಿವೇಶನಕ್ಕೆ ಸಂಬಂಧಿಸಿದಂತೆ ಜಿಪಿಎ ಹೋಲ್ಡರ್ ದೇವರಾಜು ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿ, ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ಇದರಿಂದಾಗಿ ಪುಷ್ಪಾ ಮತ್ತು ದೇವರಾಜು ನಡುವೆ ತೀವ್ರ ವಾಗ್ವಾದ ನಡೆಯಿತು.
“ನಾನು ಇಲ್ಲೇ ಕೆಲಸ ಮಾಡಿಸುತ್ತೇನೆ” ಎಂದು ಪುಷ್ಪಾ ಪಟ್ಟು ಹಿಡಿದರೆ, ದೇವರಾಜು ಕೂಡ ವಿರೋಧ ವ್ಯಕ್ತಪಡಿಸಿದರು. ವಾಗ್ವಾದವು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದು, ಪರಿಸ್ಥಿತಿ ಗಂಭೀರಗೊಂಡಿತು.
ಸ್ಥಳಕ್ಕೆ ತಕ್ಷಣ ಬಡಾವಣೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಪೊಲೀಸರು ಮಧ್ಯಪ್ರವೇಶಿಸಿದ ನಂತರ ಕಾಂಪೌಂಡ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು, ಕಾಮಗಾರಿ ಸಾಮಗ್ರಿಗಳನ್ನು ಕೆಲಸಗಾರರು ಮನೆಯೊಳಗೆ ಸಾಗಿಸಿದರು.
ಈ ವೇಳೆ ಪೊಲೀಸರನ್ನು ಪ್ರಶ್ನಿಸಿದ ಪುಷ್ಪಾ,
“ದೇವರಾಜು ಅವರನ್ನು ಏಕೆ ಬಂಧಿಸಿಲ್ಲ? ಜೆಸಿಬಿಯನ್ನು ಏಕೆ ಸೀಜ್ ಮಾಡಿಲ್ಲ?” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕೆ ಮತ್ತೆ ಜಿಪಿಎ ಹೋಲ್ಡರ್ ದೇವರಾಜು ಆಗಮಿಸುತ್ತಿರುವ ಮಾಹಿತಿ ಲಭ್ಯವಾಯಿತು. ಈ ನಡುವೆ ಮಾಧ್ಯಮದವರು ವಿಡಿಯೋ ಚಿತ್ರೀಕರಣ ಮಾಡದಂತೆ ಪುಷ್ಪಾ ತಾಕೀತು ನೀಡಿದರು.
ನಿವೇಶನ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಸಲಾಗುತ್ತಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಗಾ ವಹಿಸಿಕೊಂಡಿದ್ದಾರೆ.
The ownership issue of a plot near the house of Rocking Star Yash’s mother Pushpa came to a head today, creating a tense atmosphere in the area.










