ಬೆಂಗಳೂರು : ಕಾರು, ಬುಲೆಟ್ ಬೈಕ್ ಓಡಿಸಲು ಬರಲ್ಲ ಅಂತ ಮೊದಲ ಪತಿಯ ಬಿಟ್ಟು, ಮತ್ತೊಬ್ಬನ ಮದ್ವೆ ಆಗಿದ್ಲು

ಬೆಂಗಳೂರು : ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಪುರುಷರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣ ದೋಚುತ್ತಿದ್ದಾಳೆ ಎಂಬ ಆರೋಪದೊಂದಿಗೆ ಮಹಿಳೆಯೊಬ್ಬಳ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಎಂಬಾಕೆ ಹಣವಿರುವವರನ್ನೇ ಗುರಿಯಾಗಿಸಿಕೊಂಡು ವಂಚನೆ ನಡೆಸುತ್ತಿದ್ದಾಳೆ ಎಂದು ಮೊದಲ ಹಾಗೂ ಎರಡನೇ ಪತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈಕೆ ಈಗಾಗಲೇ ಮೂವರನ್ನು ಮದುವೆಯಾಗಿದ್ದು, ಪ್ರತಿಯೊಬ್ಬರಿಗೂ ವಿಭಿನ್ನ ಕಥೆ ಹೇಳಿ ನಂಬಿಸಿ ಬಳಿಕ ಹಣ ಪಡೆದು ದೂರವಾಗುತ್ತಿದ್ದಾಳೆ ಎಂಬುದು ಆರೋಪವಾಗಿದೆ.

ಮೊದಲಿಗೆ ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ ಸುಧಾರಾಣಿ ಅವರಿಗೆ ಇಬ್ಬರು ಮಕ್ಕಳು ಜನಿಸಿದ್ದರೂ ದಾಂಪತ್ಯ ಜೀವನ ಮಧ್ಯದಲ್ಲೇ ಪತಿಗೆ ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ ಎಂಬ ಕಾರಣ ನೀಡಿ ಮನೆಯನ್ನೇ ಬಿಟ್ಟು ತೆರಳಿದ್ದಾಳೆ ಎಂದು ಹೇಳಲಾಗಿದೆ. ನಂತರ ಗಂಡ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಹೇಳಿ ಅನಂತಮೂರ್ತಿ ಎಂಬ ಡೆಲಿವರಿ ಬಾಯ್ ಪರಿಚಯ ಬೆಳೆಸಿ, ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಾಳೆ.

ಸುಮಾರು ಒಂದೂವರೆ ವರ್ಷಗಳ ಕಾಲ ಅವನ ಜೊತೆ ವಾಸವಿದ್ದು, ಅನಾರೋಗ್ಯ, ಸಾಲ ತೀರಿಸಬೇಕು, ವ್ಯವಹಾರ ಆರಂಭಿಸಬೇಕು ಮುಂತಾದ ಕಾರಣಗಳನ್ನು ಹೇಳಿ 15ರಿಂದ 20 ಲಕ್ಷ ರೂಪಾಯಿ ಹಣ ಪಡೆದಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ.

ಹಣ ಪಡೆದುಕೊಂಡ ನಂತರ ಅನಂತಮೂರ್ತಿಯನ್ನೂ ಬಿಟ್ಟು ತೆರಳಿ, ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮೂರನೇ ಬಾರಿ ಮದುವೆಯಾಗಿರುವುದು ಇದೀಗ ಬಹಿರಂಗವಾಗಿದೆ. ಈ ವಿಷಯ ತಿಳಿದ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಇಬ್ಬರೂ ಒಟ್ಟಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.

ಶ್ರೀಮಂತರನ್ನೂ ಅಮಾಯಕರನ್ನೂ ಗುರಿಯಾಗಿಸಿಕೊಂಡು ಕೇವಲ ಹಣಕ್ಕಾಗಿ ಮದುವೆಯಾಗುತ್ತಿದ್ದಾಳೆ, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ತನಿಖೆ ಮುಂದುವರೆಸಿದ್ದಾರೆ.