ಜಗಳೂರು/ಹಾಸನ : ಮೂರು ದಶಕಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಲಾರಿ ಚಾಲಕನೊಬ್ಬ ಕೊನೆಗೂ ಕಾನೂನಿನ ಬಲೆಗೆ ಬಿದ್ದಿದ್ದಾನೆ. 1994ರಲ್ಲಿ ನಡೆದ ಪಾದಚಾರಿಯೊಬ್ಬರ ಸಾವಿಗೆ ಕಾರಣವಾಗಿದ್ದ ಆರೋಪಿಯನ್ನು ಜಗಳೂರು ಪೊಲೀಸರು ಬರೋಬ್ಬರಿ 32 ವರ್ಷಗಳ ನಂತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ನಿವಾಸಿ ಗಂಗಾಧರಪ್ಪ (67) ಬಂಧಿತ ಆರೋಪಿ.
ಘಟನೆಯ ಹಿನ್ನೆಲೆ: 1994ರಲ್ಲಿ ಜಗಳೂರು ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದ ಸಮೀಪದ ಹಳೆಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಈ ಘಟನೆ ನಡೆದಿತ್ತು. ಗಂಗಾಧರಪ್ಪ ಚಲಾಯಿಸುತ್ತಿದ್ದ ಲಾರಿ, ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಜೋರಾಗಿ ಡಿಕ್ಕಿ ಹೊಡೆದಿತ್ತು. ಅಪಘಾ*ತದ ತೀವ್ರತೆಗೆ ಆ ವ್ಯಕ್ತಿ ಸ್ಥಳದಲ್ಲೇ ಮೃ*ಪಟ್ಟಿದ್ದರು. ಅಪಘಾ*ತ ಸಂಭವಿಸುತ್ತಿದ್ದಂತೆ ಚಾಲಕ ಗಂಗಾಧರಪ್ಪ ಲಾರಿ ಬಿಟ್ಟು ಪರಾರಿಯಾಗಿದ್ದನು.
ಪೊಲೀಸ್ ಕಾರ್ಯಾಚರಣೆ: ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 (ಎ) (ನಿರ್ಲಕ್ಷ್ಯ ಚಾಲನೆಯಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ನಂತರ ಆರೋಪಿ ತನ್ನ ಗುರುತು ಪತ್ತೆಯಾಗದಂತೆ ಬೇರೆ ಬೇರೆ ಕಡೆ ತಲೆಮರೆಸಿಕೊಂಡು ತಿರುಗುತ್ತಿದ್ದನು. ಇಷ್ಟು ವರ್ಷಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಈತನನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿತ್ತು.
ಸಿಪಿಐ ಸಿದ್ರಾಮಯ್ಯ ಅವರ ಮಾರ್ಗದರ್ಶನದಲ್ಲಿ, ಎಎಸ್ಐ ವೆಂಕಟೇಶ್ ಜಿ.ಟಿ. ಮತ್ತು ತಂಡದವರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಅರಸೀಕೆರೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ನ್ಯಾಯಾಂಗ ಬಂಧನ:
ಮೂರು ದಶಕಗಳ ಹಿಂದಿನ ಹಳೆಯ ಪ್ರಕರಣವನ್ನು ಬೆನ್ನಟ್ಟಿ ಆರೋಪಿಯನ್ನು ಬಂಧಿಸಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಬಂಧಿತ ಗಂಗಾಧರಪ್ಪನನ್ನು ಬುಧವಾರ ಜಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.










