ಸಕಲೇಶಪುರ : ಅರಣ್ಯ ಇಲಾಖೆ ಸಾರ್ವಜನಿಕರೊಂದಿಗೆ ಸ್ನೇಹಪರ ಹಾಗೂ ವಿಶ್ವಾಸಭರಿತ ಬಾಂಧವ್ಯ ಬೆಳೆಸಬೇಕು- ಶಾಸಕ ಸಿಮೆಂಟ್ ಮಂಜು

MLA Cement Manju said that forest department personnel should not only be limited to law enforcement, but should also develop a friendly and trusting relationship with the public.

ಸಕಲೇಶಪುರ: ಅರಣ್ಯ ಇಲಾಖೆ ಸಿಬ್ಬಂದಿ ಕೇವಲ ಕಾನೂನು ಪಾಲನೆಗೆ ಮಾತ್ರ ಸೀಮಿತರಾಗದೇ, ಸಾರ್ವಜನಿಕರೊಂದಿಗೆ ಸ್ನೇಹಪರ ಹಾಗೂ ವಿಶ್ವಾಸಭರಿತ ಬಾಂಧವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ತಾಲ್ಲೂಕಿನ ಯಸಳೂರು ಪ್ರಾದೇಶಿಕ ವಲಯದಲ್ಲಿ ₹40 ಲಕ್ಷ ವೆಚ್ಚದಲ್ಲಿ ಮುಂಚೂಣಿ ಸಿಬ್ಬಂದಿ ವಸತಿಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಸರ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಮಹತ್ವದ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಿಸ್ವಾರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮುಂದಿನ ಪೀಳಿಗೆಗೆ ಅರಣ್ಯವನ್ನು ಉಳಿಸುವ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದ್ದು, ಅರಣ್ಯ ಇಲಾಖೆ ಹಾಗೂ ಜನರ ನಡುವೆ ಹೊಂದಾಣಿಕೆ ಇದ್ದರೆ ಮಾತ್ರ ಅರಣ್ಯ ಸಂರಕ್ಷಣೆ ಪರಿಣಾಮಕಾರಿಯಾಗಿ ಸಾಧ್ಯವಾಗುತ್ತದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯದ ಮೇಲೆ ಅವಲಂಬಿತವಾಗಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯ ಮನೋಭಾವ ಅರಣ್ಯ ಸಿಬ್ಬಂದಿಗಳಲ್ಲಿ ಇರಬೇಕು ಎಂದು ತಿಳಿಸಿದರು.

ಸಾರ್ವಜನಿಕರೊಂದಿಗೆ ಗೌರವಯುತವಾಗಿ ವರ್ತಿಸುವುದು, ಅವರ ಅಹವಾಲುಗಳನ್ನು ಸಹಾನುಭೂತಿಯಿಂದ ಆಲಿಸುವುದು ಹಾಗೂ ಸಮಸ್ಯೆಗಳಿಗೆ ಸಾಧ್ಯವಾದಷ್ಟು ತ್ವರಿತ ಪರಿಹಾರ ನೀಡುವುದರಿಂದ ಇಲಾಖೆಯ ಮೇಲಿನ ವಿಶ್ವಾಸ ಮತ್ತಷ್ಟು ಬಲವಾಗುತ್ತದೆ. ಅರಣ್ಯ ರಕ್ಷಣೆಯ ಜೊತೆಗೆ ಮಾನವೀಯತೆಯೂ ಅಷ್ಟೇ ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.

ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿ ರಕ್ಷಣೆಯಂತಹ ಕಠಿಣ ಮತ್ತು ಅಪಾಯಕರ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಶಾಸಕರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಯಸಳೂರು ಸಹಾಯಕ ಉಪ ಸಂರಕ್ಷಣಾಧಿಕಾರಿ ಹಾಗೂ ಯಸಳೂರು ವಲಯ ಅರಣ್ಯಾಧಿಕಾರಿ ರೇವಣ್ಣ ಸಿದ್ದಯ್ಯ ಬಿ. ಹಿರೇಮಠ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

MLA Cement Manju said that forest department personnel should not only be limited to law enforcement, but should also develop a friendly and trusting relationship with the public.