ಸಕಲೇಶಪುರ: ರಸ್ತೆ ಅಭಿವೃದ್ಧಿಯು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಸುಗಮ ಸಂಚಾರ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶ ಹಾಗೂ ಉದ್ಯೋಗ ಸೃಷ್ಟಿಯ ಮೂಲಕ ಸಮಗ್ರ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸೋಮವಾರ ತಾಲ್ಲೂಕಿನ ಉಚ್ಚಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಂದೂರು ಬಳಿ ಸುಮಾರು ₹3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಪ್ರಗತಿಯ ಸಂಕೇತವಾಗಿದ್ದು, ನಾಗರಿಕರ ದೈನಂದಿನ ಸಂಚಾರಕ್ಕೆ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಮುಖ್ಯ ರಸ್ತೆಯಾದ ಐಗೂರುನಿಂದ ಚಿಕ್ಕಂದೂರುವರೆಗಿನ ರಸ್ತೆ ತೀರ ಹದಗೆಟ್ಟಿದ್ದು, ಇದೀಗ ಸುಮಾರು ₹3 ಕೋಟಿ ವೆಚ್ಚದಲ್ಲಿ ಮರು ಡಾಂಬರೀಕರಣ ಕಾಮಗಾರಿ ಆರಂಭಗೊಳ್ಳಲಿದೆ. ಈ ರಸ್ತೆ ಅಭಿವೃದ್ಧಿಯಿಂದ ಸರಗಳ್ಳಿ ಹಾಗೂ ಬಾಳೆಕೆರೆ ವೃತ್ತಗಳ ಅಗಲೀಕರಣ ಸಾಧ್ಯವಾಗಲಿದೆ ಎಂದು ತಿಳಿಸಿದರು.
ರಾಜ್ಯ ಹೆದ್ದಾರಿ–8 (ಹಿರಿಸಾವೆ–ತಟ್ಟಹಳ್ಳಿ) ಹಾಗೂ ರಾಜ್ಯ ಹೆದ್ದಾರಿ–277 (ಕೆಂಪುಹೊಳೆ–ಕಣ್ಣೂರು) ಸಂಪರ್ಕಿಸುವ ಈ ಜಿಲ್ಲಾ ಮುಖ್ಯ ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕಾಮಗಾರಿಯ ವೇಳೆ ರಸ್ತೆ ಎರಡೂ ಬದಿಗಳಲ್ಲಿನ ಚರಂಡಿ ಸ್ವಚ್ಛತೆ, ತೋಳು ಚರಂಡಿ ನಿರ್ಮಾಣ ಹಾಗೂ ರಸ್ತೆಗೆ ಹೊಂದಿಕೊಂಡಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಕೆಲಸ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಗಳು ಮಾತನಾಡಿ, ಕ್ಷೇತ್ರದ ಕಟ್ಟಕಡೆಯ ಗ್ರಾಮಗಳಾದ ಈ ಭಾಗಕ್ಕೆ ಶಾಸಕರು ಹೆಚ್ಚಿನ ಅನುದಾನ ಒದಗಿಸಿರುವುದು ಪ್ರಶಂಸನೀಯವಾಗಿದೆ ಎಂದರು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಬಿಜೆಪಿ ಶಾಸಕನಾಗಿ ಮಂಜುರವರು ಉಳಿದ ಕ್ಷೇತ್ರಗಳಿಗಿಂತ ಹೆಚ್ಚು ಅನುದಾನ ತರುವಲ್ಲಿ ಶ್ರಮಿಸುತ್ತಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು.
ಕ್ಷೇತ್ರದ ವಿಸ್ತೀರ್ಣ ಬಹಳ ದೊಡ್ಡದಾಗಿದ್ದರೂ ಸರ್ಕಾರದ ಭಾಗವಾಗದೆ ಅನುದಾನ ತರುತ್ತಿರುವ ಶಾಸಕರನ್ನು ಪಡೆದಿರುವುದು ಈ ಕ್ಷೇತ್ರದ ಜನರ ಭಾಗ್ಯ. 20–25 ವರ್ಷಗಳಿಂದ ರಸ್ತೆ ನೋಡದ ಗ್ರಾಮಗಳು ಇದೀಗ ಉತ್ತಮ ಗುಣಮಟ್ಟದ ರಸ್ತೆಗಳನ್ನು ಕಾಣುತ್ತಿವೆ. ಹಲವಾರು ಬಸ್ ನಿಲ್ದಾಣಗಳು ಹಾಗೂ ಸಿಮೆಂಟ್ ರಸ್ತೆ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರವು ಸಮಗ್ರ ಅಭಿವೃದ್ಧಿ ಹೊಂದಲಿದೆ. ದೇವರು ಶಾಸಕರಿಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.










