ಬೆಂಗಳೂರು : ಆಚೆ ಬಂದಮೇಲೂ ಗೆದ್ರಿ’; ಅಪ್ಪುನ ಮರೆಯದ ಗಿಲ್ಲಿಗೆ ಫ್ಯಾನ್ಸ್ ಅಭಿನಂದನೆ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಅವರು ಹುಟ್ಟೂರಲ್ಲಿ ಭರ್ಜರಿ ವಿಜಯಯಾತ್ರೆ ನಡೆಸಿದ ಬಳಿಕ ಬೆಂಗಳೂರಿಗೆ ಮರಳಿದ್ದಾರೆ.

ಬೆಂಗಳೂರಿಗೆ ಬಂದ ತಕ್ಷಣವೇ ಅವರು ಪುನೀತ್ ರಾಜ್‌ಕುಮಾರ್ ಸ್ಮಾರಕಕ್ಕೆ ಭೇಟಿ ನೀಡಿ, ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.

ಪ್ರತಿ ಕಲಾವಿದನಿಗೂ, ಅದರಲ್ಲೂ ಯುವ ಕಲಾವಿದರಿಗೆ ಪುನೀತ್ ರಾಜ್‌ಕುಮಾರ್ ಎಂದರೆ ಅಪಾರ ಗೌರವ ಮತ್ತು ವಿಶೇಷ ಪ್ರೀತಿ ಇರುವುದು ಸಹಜ. ಗಿಲ್ಲಿ ನಟ ಕೂಡ ಇದಕ್ಕೆ ಹೊರತಾಗಿಲ್ಲ. ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಅವರು ಪುನೀತ್ ಸ್ಮಾರಕಕ್ಕೆ ತೆರಳಿ, ಅಪ್ಪು ಸಮಾಧಿಯ ಬಳಿ ಕಪ್ ಇಟ್ಟು ನಮಸ್ಕರಿಸಿದ ಕ್ಷಣ ಅಪ್ಪು ಅಭಿಮಾನಿಗಳ ಮನ ಗೆದ್ದಿದೆ. ಗಿಲ್ಲಿ ಅವರ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ನಿರಂತರ ಮನರಂಜನೆಯ ಮೂಲಕ ವೀಕ್ಷಕರ ಮನ ಸೆಳೆದಿದ್ದರು. ಇದರ ಫಲವಾಗಿ ಅವರಿಗೆ 45 ಕೋಟಿಗೂ ಅಧಿಕ ವೋಟ್‌ಗಳು ಬಂದಿವೆ ಎನ್ನಲಾಗಿದ್ದು, ಆದರೆ ಅಧಿಕೃತ ವೋಟ್ ಸಂಖ್ಯೆಯನ್ನು ಇನ್ನೂ ಪ್ರಕಟಿಸಲಾಗಿಲ್ಲ.

ಬಿಗ್ ಬಾಸ್ ವಿನ್ನರ್ ಆದ ಬಳಿಕ ಗಿಲ್ಲಿ ನಟ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ನಟರಾದ ಶಿವರಾಜ್‌ಕುಮಾರ್, ಸುದೀಪ್ ಅವರನ್ನು ಭೇಟಿ ಮಾಡಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೂರವಾಣಿ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.