ಕಲಬುರಗಿ: ಪ್ರೀತಿಸಿ ಮದುವೆಯಾದ ನವವಿವಾಹಿತೆ ಕೇವಲ ಎರಡು ತಿಂಗಳಲ್ಲೇ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ. ಅನುಸುಯಾ ಅವಿನಾಶ್ ಆಕಡೆ (26) ಮೃತ ಮಹಿಳೆ.
ಅನುಸುಯಾ ತನ್ನ ಅತ್ತೆಮಗ ಅವಿನಾಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಎರಡು ತಿಂಗಳ ಹಿಂದೆ ಎರಡೂ ಕುಟುಂಬಗಳ ಸಮ್ಮುಖದಲ್ಲಿ ವಿವಾಹ ನೆರವೇರಿತ್ತು. ಮದುವೆಯ ನಂತರ ಗಂಡನೊಂದಿಗೆ ಹಳ್ಳಿಯಲ್ಲಿ ವಾಸಿಸಲು ಅನುಸುಯಾ ಮಾನಸಿಕವಾಗಿ ಒಪ್ಪಿಕೊಳ್ಳಲಾಗದೆ ಬೇಸರಗೊಂಡಿದ್ದಳು ಎನ್ನಲಾಗಿದೆ.
ಮೃತ ಅನುಸುಯಾಳ ಮೂವರು ಸಹೋದರಿಯರು ತಮ್ಮ ಗಂಡಂದಿರೊಂದಿಗೆ ಬೆಂಗಳೂರು ಹಾಗೂ ಮುಂಬೈ ನಗರಗಳಲ್ಲಿ ವಾಸವಾಗಿದ್ದಾರೆ. ಸಹೋದರಿಯರು ಮಹಾನಗರಗಳಲ್ಲಿ ನೆಲೆಸಿರುವಾಗ, ತಾನು ಚಿಕ್ಕ ಪಟ್ಟಣದ ಹಳ್ಳಿಯಲ್ಲಿ ವಾಸಿಸಬೇಕಾದ ಸ್ಥಿತಿಗೆ ಒಳಗಾಗಿರುವುದಾಗಿ ಅನುಸುಯಾ ಮನನೊಂದುಕೊಂಡಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಮನೋವ್ಯಥೆಯ ನಡುವೆಯೇ ಅನುಸುಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ನವವಿವಾಹಿತೆಯ ಜೀವನಕ್ಕೆ ಅಂತ್ಯ ಹಾಡಿದ ದುರಂತವಾಗಿ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ










