ಚನ್ನರಾಯಪಟ್ಟಣ: ಆಹಾರ ಪದ್ಧತಿಯೊಂದಿಗೆ ಜೀವನ ಶೈಲಿಯ ಬದಲಾವಣೆಯ ಪರಿಣಾಮ ಆರೋಗ್ಯ ಸ್ಥಿತಿಯು ಸೀಮಿತ ಕಳೆದುಕೊಳ್ಳುತ್ತಿದೆ ಎಂದು ನ್ಯೂ ಸ್ಪರ್ಶ ಲೈಫ್ ಲೈನ್ ಹಾಸ್ಪಿಟಲ್ ವೈದ್ಯ ಡಾ.ಲೋಕೇಶ್ ಹೇಳಿದರು.
ಪಟ್ಟಣದಲ್ಲಿ ನ್ಯೂ ಸ್ಪರ್ಶ ಲೈಫ್ ಲೈನ್ ಹಾಸ್ಪಿಟಲ್, ರಂಗಕಲಾಸಿರಿ ಸಂಘ ಹಾಗೂ ಶ್ರೀ ರಾಮ ಸೇನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ, ಹಣ, ಆಸ್ತಿಗಿಂತ ಆರೋಗ್ಯ ಸಂಪಾದನೆ ಅತಿಮುಖ್ಯ ಎಂದರು.
ಗ್ರಾಮೀಣ ಭಾಗದ ಜನತೆ ಸದಾ ಕೃಷಿ ಚಟುವಟಿಕೆಗಳಲ್ಲಿ ತೊಡಗುವ ಬರದಲ್ಲಿ ತಮ್ಮ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ವರ್ಷದಲ್ಲಿ ಒಂದೆರಡು ಬಾರಿ ತಮ್ಮ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಇತರರ ಬದುಕಿಗೆ ಬೆಳಕು ನೀಡಿದ ಪುಣ್ಯ ಸಿಗಲಿದೆ. ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಹಾಗೂ ಶಸ್ತ್ರ ಚಿಕಿತ್ಸೆ ವೇಳೆ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಅಂತಹ ಸಮಯದಲ್ಲಿ ರಕ್ತ ಸಿಗದೇ ರೋಗಿಗಳು ಸಾವು-ಬದುಕಿನ ನಡುವೆ ಹೋರಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ದಯವಿಟ್ಟು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಇತರರಿಗೂ ನೆರವಾಗಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಕಣ್ಣಿನ ಪರೀಕ್ಷಿಸಿ ಸೇರಿದಂತೆ ವಿವಿಧ ತಪಾಸಣೆಗಳು ಜರುಗಿದ್ದು 110 ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ವೈದ್ಯರಾದ ಡಾ. ಪ್ರವೀಣ್, ಆಯುರ್ವೇದಿಕ್ ತಜ್ಞ ಡಾ.ಪ್ರವೀಣ್, ಡಾ.ನೇಹಾ ಹಾಗೂ ಇತರರಿದ್ದರು.
Dr. Lokesh, a physician at New Sparsh Life Line Hospital, said that due to changes in lifestyle along with diet, health status is deteriorating.










