ಮಾಡಾಳು (ಅರಸೀಕೆರೆ):ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಲಿಂಗೈಕ್ಯ ಶ್ರೀ ನೀಲಲೋಚನ ಸ್ವಾಮೀಜಿಯವರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆಯಿತು.
ಕೋಡಿಮಠ ಮಹಾಸಂಸ್ಥಾನದ ವತಿಯಿಂದ ಆಯೋಜಿಸಲಾಗಿದ್ದ ಈ ಸಂದರ್ಭದಲ್ಲಿ ಕರ್ತೃಗದ್ದಿಗೆಗೆ ಅರ್ಚಕರಿಂದ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವೈದಿಕ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ನೂರಾರು ಭಕ್ತರು ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಸಂಜೆ 4.30ರ ಸುಮಾರಿಗೆ ಗ್ರಾಮದ ಮೂಲಸನ್ನಿಧಿ ಅಮ್ಮನವರ ಬಾವಿಯಿಂದ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಶಿವಲಿಂಗಜ್ಜಯ್ಯನವರ ಮೂರ್ತಿ ಹಾಗೂ ಲಿಂಗೈಕ್ಯ ಶ್ರೀ ನೀಲಲೋಚನ ಸ್ವಾಮೀಜಿಯವರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ, ವೀರಗಾಸೆ ಕುಣಿತ ಹಾಗೂ ಮಂಗಳ ಕರಡೇವು ವಾದ್ಯಗಳೊಂದಿಗೆ ಉತ್ಸವ ಮೆರವಣಿಗೆ ನಡೆಯಿತು. ಕೋಡಿಮಠದ ಉತ್ತರಾಧಿಕಾರಿ ಚೇತನ್ ಮುರಿದೇವರ ಅವರ ನೇತೃತ್ವದಲ್ಲಿ ಭಕ್ತರು ಉತ್ಸವದಲ್ಲಿ ಭಾಗವಹಿಸಿ ದೇವಾಲಯಕ್ಕೆ ಮೆರವಣಿಗೆಯಾಗಿ ಆಗಮಿಸಿದರು.
ಉತ್ಸವದ ಸಂದರ್ಭದಲ್ಲಿ ಪುಟಾಣಿ ಹೆಣ್ಣುಮಕ್ಕಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮೂಲಸ್ಥಾನ ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಎಸ್. ನಟರಾಜ್, ಗೌರವಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಕೋಡಿಮಠ ಏಜೆಂಟ್ ಸಿ. ಮಹದೇವಪ್ಪ, ಮುಖಂಡರಾದ ಎಂ.ಸಿ. ನಟರಾಜ್, ಎಂ.ಜಿ. ಶಿವಣ್ಣ, ಎಂ.ಎಸ್. ಮುರುಳೇಗೌಡ, ಮಾಡಾಳು ಶಿವಲಿಂಗಪ್ಪ, ಅಶೋಕ್, ಎಂ.ಟಿ. ಲೋಕೇಶ್, ಎಂ.ಡಿ. ಸೋಮಶೇಖರ, ಹೆಚ್.ಕೆ. ಚಂದ್ರಪ್ಪ, ದಾಸಪ್ಪ, ಕಟ್ನಿ ತಿಮ್ಮಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.










