ಹಾಸನ: ಗಮಕ ಹಬ್ಬ: ಆಸೂರಿ ಕೆ. ರಾಮಸ್ವಾಮಿ ಅಯ್ಯಂಗಾರ್ ಅವರ ಭರತಭಕ್ತಿಕಾವ್ಯ ಲೋಕಾರ್ಪಣೆ

ಹಾಸನ: ಕರ್ನಾಟಕ ಗಮಕ ಕಲಾಪರಿಷತ್ತು, ಬೆಂಗಳೂರು–ಹಾಸನ ಜಿಲ್ಲಾ ಘಟಕ, ಶ್ರೀ ಸೀತಾರಾಮಾಂಜನೇಯ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಸ್ಕಾರ ಭಾರತೀ ಹಾಸನ ಜಿಲ್ಲಾ ಸಮಿತಿ ಹಾಗೂ ಹಾಸನ ನಗರ ಗೃಹನಿರ್ಮಾಣ ಸಹಕಾರಿ ಸಂಘ ಇವರ ಸಹಯೋಗದಲ್ಲಿ ನಗರದ ಶ್ರೀ ಸೀತಾರಾಮಾಂಜನೇಯ ದೇವಾಲಯದ ಸಪ್ತಪದಿ ಸೌದಾಮಿನೀ ಸಭಾಂಗಣದಲ್ಲಿ ಗಮಕ ಹಬ್ಬ–ಕವಿನಮನ ಕಾರ್ಯಕ್ರಮ ಭಕ್ತಿಭಾವಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಸರಳ ಕವಿ ಆಸೂರಿ ಕೆ. ರಾಮಸ್ವಾಮಿ ಅಯ್ಯಂಗಾರ್ ಅವರ ವಿರಚಿತ ಮರುಮುದ್ರಿತ ಕೃತಿ *“ಭರತಭಕ್ತಿಕಾವ್ಯ”*ವನ್ನು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದ ಕುಲಸಚಿವರು ಹಾಗೂ ಸಂಸ್ಕೃತ ಪ್ರಾಧ್ಯಾಪಕರಾದ ವಿದ್ವಾನ್ ಡಾ. ಶ್ರೀಧರ ಭಟ್ ಅವರು ಲೋಕಾರ್ಪಣೆ ಮಾಡಿದರು.

ವೇದಿಕೆಯಲ್ಲಿ ಆಸೂರಿಯವರ ಮೊಮ್ಮಕ್ಕಳಾದ ವಿದುಷಿ ಪದ್ಮಜಾ ಶ್ರೀನಿವಾಸನ್ ಮತ್ತು ಶ್ರೀನಿವಾಸ್, ಕಲಾಶ್ರೀ ಗಣೇಶ್ ಉಡುಪ, ಪ್ರೊ. ಜಿ.ಎನ್. ಅನಸೂಯ, ನಾರಾಯಣ, ಕುಮಾರಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ವಿದುಷಿ ಪದ್ಮಜಾ ಶ್ರೀನಿವಾಸ್ ಪರಿವಾರದ ಪ್ರಾಯೋಜಕತ್ವದಲ್ಲಿ ನಡೆದ ಗಮಕ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಗಮಕ ವಿದ್ವಾನ್ ವಿಷ್ಣುಪ್ರಸಾದ್ ಕಲ್ಲೂರಾಯ ಅವರು ಆಸೂರಿ ಕೆ. ರಾಮಸ್ವಾಮಿ ಅಯ್ಯಂಗಾರ್ ವಿರಚಿತ ಗೋಕರ್ಣನಾಥ ಮಹಿಮಾದರ್ಶ ಕಾವ್ಯದಿಂದ ಆತ್ಮಲಿಂಗ ಪ್ರಸಂಗವನ್ನು ತಮ್ಮ ಕಂಠಸಿರಿಯಿಂದ ಸುಶ್ರಾವ್ಯವಾಗಿ ಗಾಯನ ಮಾಡಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದರು.

ಅವರ ಗಾಯನಕ್ಕೆ ಉಜಿರೆ ಎಸ್.ಡಿ.ಎಮ್. ಮಹಾವಿದ್ಯಾಲಯದ ಕುಲಸಚಿವರಾದ ವಿದ್ವಾನ್ ಡಾ. ಶ್ರೀಧರ ಭಟ್ ಅವರು ವಿದ್ವತ್ಪೂರ್ಣ ವ್ಯಾಖ್ಯಾನ ನೀಡಿದರಿಂದ ಶ್ರೋತೃವರ್ಗ ಮಂತ್ರಮುಗ್ಧಗೊಂಡಿತು.

ಈ ಸಂದರ್ಭದಲ್ಲೇ ಕಾರ್ಯಕ್ರಮದ ಪ್ರಾಯೋಜಕರಾದ ವಿದುಷಿ ಪದ್ಮಜಾ ಶ್ರೀನಿವಾಸ್ ದಂಪತಿಗಳು ಹಾಗೂ ಡಾ. ಅನೂಷ ಕೆದ್ಲಾಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.