video:ಚನ್ನರಾಯಪಟ್ಟಣ: ಕಬ್ಬಳಿ ಪುಷ್ಕರಣಿಯಲ್ಲಿ ಚುಂಚಶ್ರೀಗಳ ವೈಭವದ ತೆಪ್ಪೋತ್ಸವ,ಧನುರ್ಮಾಸ ಪೂಜೆ ಸಂಪನ್ನ ,ವ್ರತ ಪೂರ್ಣಗೊಳಿಸಿದ ಬಸವ ಮಾಲಾಧಾರಿಗಳು

ಚನ್ನರಾಯಪಟ್ಟಣ: ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಧನುರ್ಮಾಸ ಸಂಪನ್ನ ಪ್ರಯುಕ್ತ ಬಸವ ಮಾಲಾಧಾರಿಗಳ ಪಡಿಪೂಜೆ ಹಾಗೂ ಚುಂಚಶ್ರೀಗಳ ತೆಪ್ಪೋತ್ಸವವು ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಬುಧವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಹಿನ್ನೆಲೆಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಸನ್ನಿಧಿಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡವು. ರಾತ್ರಿ 10.30 ಗಂಟೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭಕ್ತರು ಪಾದಪೂಜೆ ಮಾಡಿ ಸ್ವಾಗತಿಸಿದರು. ಮಂಗಳ ವಾದ್ಯದೊಂದಿಗೆ ಬರಮಾಡಿಕೊಂಡರು.

ಚುಂಚಶ್ರೀಗಳು ಮೊದಲಿಗೆ ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಹಿಂಭಾಗದಲ್ಲಿರುವ ಬಸವ ಮೂರ್ತಿಗೆ ಕ್ಷೀರಾಭಿಷೇಕ ನೆರವೇರಿಸಿದರು. ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಣೆ ಮಾಡಿ ಆರತಿ ಬೆಳಗಿಸಿದರು. ವೈಭವದ ತೆಪ್ಪೋತ್ಸವ: ರಾತ್ರಿ 11.45 ರ ಸುಮಾರಿನಲ್ಲಿ ದೇಗುಲದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಚುಂಚಶ್ರೀಗಳ ತೆಪ್ಪೋತ್ಸವ ಜರುಗಿತು.

ಶ್ರೀ ಬಸವೇಶ್ವರ ಸ್ವಾಮಿ ಭಾವಚಿತ್ರ, ದಸರಿಘಟ್ಟದ ಶ್ರೀ ಚೌಡೇಶ್ವರಿ ದೇವಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ತಳಿ ಪ್ರತಿಷ್ಠಾಪಿಸಿದ್ದು ಪುಷ್ಪ ಸಿಂಹಾಸನದ ಮೇಲೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಅಲಂಕೃತರಾದ ಬಳಿಕ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವ ಚಾಲನೆ ನೀಡಿದರು. ಭಕ್ತರ ಜಯ ಘೋಷಣೆಯೊಂದಿಗೆ ಪುಷ್ಕರಣಿಯಲ್ಲಿ ಮೂರು ಸುತ್ತು ತೆಪ್ಪೋತ್ಸವದ ಪ್ರದಕ್ಷಣೆ ಸಾಗಿತು.

ತುಮಕೂರು, ಚನ್ನರಾಯಪಟ್ಟಣ, ತಿಪಟೂರು, ನಾಗಮಂಗಲ, ತುರುವೆಕೆರೆ ಮತ್ತು ಅರಸಿಕೆರೆ ತಾಲ್ಲೂಕುಗಳ ವಿವಿಧ ಗ್ರಾಮಗಳಿಂದ ಗ್ರಾಮದೇವತೆಗಳನ್ನು ಮೆರವಣಿಗೆಯಲ್ಲಿ ಕಬ್ಬಳಿ ಗ್ರಾಮಕ್ಕೆ ಕರೆತಂದಿದ್ದರು. ದೇವಸ್ಥಾನದ ಆವರಣದಲ್ಲಿ ಭಕ್ತರು ಭಜನೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಸಾವಿರಾರು ಬಸವ ಮಾಲಾಧಾರಿಗಳು ತಮ್ಮ ಗ್ರಾಮ ದೇವತೆಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ಬುಧವಾರ ರಾತ್ರಿ ಮೆರವಣಿಗೆಯಲ್ಲಿ ಆಗಮಿಸಿ ತಮ್ಮ ಧನುರ್ಮಾಸ ವ್ರತವನ್ನು ಸಂಪನ್ನಗೊಳಿಸಿದರು. ಬಳಿಕ ದೇವಸ್ಥಾನದ ಪಕ್ಕದಲ್ಲಿರುವ ಪುಷ್ಕರಣಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿದರು. ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ತಾವು ತೊಟ್ಟಿದ್ದ ವಸ್ತ್ರ ಮತ್ತು ಬಸವ ಮಾಲೆಯನ್ನು ತೆಗೆದರು. ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು.

ಅಯ್ಯಪ್ಪಸ್ವಾಮಿಗೆ ಮಾಲೆ ಧರಿಸವ ಮಾದರಿಯಲ್ಲಿಯೇ ಕಬ್ಬಳಿ ಬಸವೇಶ್ವರ ಸ್ವಾಮಿಗೆ ಸಾವಿರಾರು ಭಕ್ತರು ಧನುರ್ಮಾಸದ ಪ್ರಾರಂಭದಿಂದ ಬಸವಮಾಲೆಯನ್ನು ಧರಸಿ ವ್ರತ ಕೈಗೊಂಡಿದ್ದರು. ಈ ಆಚರಣೆಯು ಕಳೆದ 40 ವರ್ಷಗಳಿಂದ ನಡೆಯುತ್ತಿದ್ದೆ. ತಮ್ಮ ಗ್ರಾಮದೇವತೆ ಮತ್ತು ದೇವಸ್ಥಾನದಿಂದ ತೆಗೆದುಕೊಂಡು ಹೋಗಿದ್ದ ಕಳಸವನ್ನು ವಿವಿಧ ವಾಧ್ಯಗಳು, ಕಲಾತಂಡಗಳ ಮೆರವಣಿಗೆಯಲ್ಲಿ ಬುಧವಾರ ರಾತ್ರಿ ಸಾವಿರಾರು ಮಾಲಾಧಾರಿಗಳು ದೇವಸ್ಥಾನದ ಆವರಣವನ್ನು ಸೇರಿದರು.

ಗುರುವಾರ ಮುಂಜಾನೆ ಸುಮಾರನಲ್ಲಿ ಸನ್ನಿಧಿಗೆ ಆಗಮಿಸಿದ್ದ ಎಲ್ಲಾ ಗ್ರಾಮ ದೇವತೆಗಳಿಗೂ ಮಠದ ವತಿಯಿಂದ ಮಡಿಲಕ್ಕಿ ಸೇವೆ ನಡೆಯಿತು. ಹಾಸನ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ ಸೇರಿದಂತೆ ಗ್ರಾಮದ ಮುಖಂಡರು, ವಿವಿಧ ಮಠಗಳ ಸ್ವಾಮೀಜಿಗಳು ಇದ್ದರು.

ಸುಮಾರು 15 ವರ್ಷಗಳಿಂದ ಧನುರ್ಮಾಸ ಪೂಜೆಯಲ್ಲಿ ಪಾಲ್ಗೊಂಡು ಮಾಲೆ ಧರಿಸಿ ದೇವರ ಸೇವೆ ಮಾಡುತ್ತಿದ್ದೀನೆ. ಇದರಿಂದ ನನಗೆ ತುಂಬಾ ಒಳ್ಳೆಯದೇ ಹಾಗಿದೆ. ಸಂಕಷ್ಟ ಎಂದು ಇಲ್ಲಿಗೆ ಬರುವ ಭಕ್ತರು ಎಂದಿಗೂ ಬರೀ ಕೈಯಲ್ಲಿ ಹಿಂದಿರುಗಿಲ್ಲ. ಶ್ರೀ ಬಸವೇಶ್ವರ ಸ್ವಾಮಿಯು ಜನ ಜಾನುವಾರುಗಳನ್ನು ಕಾಯುವ ದೈವನಾಗಿದ್ದು ನಂಬಿದ ಭಕ್ತರಿಗೆ ಸುಖ, ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸುತ್ತಾನೆ.