ನುಗ್ಗೇಹಳ್ಳಿ : ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಟಾಪ್ ನರ್ಸ್‌ಗಳು ಹಾಗೂ ವಿವಿಧ ಸಿಬ್ಬಂದಿಗಳಿಗೆ ಕಳೆದ 5 ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ

ನುಗ್ಗೇಹಳ್ಳಿ : ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಟಾಪ್ ನರ್ಸ್ ಸೇರಿದಂತೆ ವಿವಿಧ ಸಿಬ್ಬಂದಿಗಳಿಗೆ ಕಳೆದ 5 ತಿಂಗಳಿಂದ ಆರೋಗ್ಯ ಇಲಾಖೆಯಿಂದ ವೇತನ ಬಿಡುಗಡೆಯಾಗದೆ ನೌಕರರು ಸಂಕಷ್ಟದಲ್ಲಿದ್ದು ಈ ಬಗ್ಗೆ ಆರೋಗ್ಯ ಸಚಿವರು ಹಾಗೂ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮಾನವೀಯತೆಯ ದೃಷ್ಟಿಯಿಂದ ಶೀಘ್ರ ಗಮನಹರಿಸುವಂತೆ ಶಾಸಕ ಸಿಎನ್ ಬಾಲಕೃಷ್ಣ ಒತ್ತಾಯ ಮಾಡಿದರು.

ಹೋಬಳಿಯ ಹೊನ್ನ ಮಾರನಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಆಯುಷ್ಮಾನ್ ಸ್ವಾಸ್ಥ್ಯ ಯೋಜನೆ ವತಿಯಿಂದ ಸುಮಾರು 65 ಲಕ್ಷ ವೆಚ್ಚದಲ್ಲಿ ನೂತನ ಆರೋಗ್ಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಆರೋಗ್ಯ ಇಲಾಖೆಯಲ್ಲಿ ಸ್ಟಾಪ್ ನರ್ಸ್ ಸೇರಿದಂತೆ ವಿವಿಧ ಸಿಬ್ಬಂದಿಗಳಿಗೆ ಕಳೆದ 5 ತಿಂಗಳಿಂದ ಸಂಬಳವಾಗದೆ ಸಿಬ್ಬಂದಿಗಳು ತೀವ್ರ ಸಂಕಷ್ಟದಲ್ಲಿದ್ದು ಇದರಿಂದ ಅವರ ಕುಟುಂಬಗಳ ನಿರ್ವಹಣೆಗೆ ಸಮಸ್ಯೆಯಾಗಿದೆ ಈ ಬಗ್ಗೆ ಇದೇ ತಿಂಗಳು 27ರಿಂದ ನಡೆಯುವ ವಿಶೇಷ ಅಧಿವೇಶನದಲ್ಲಿ ಈ ಸಮಸ್ಯೆಯ ಕುರಿತು ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದವರು ಅವರು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಸಮಸ್ಯೆಯ ಕುರಿತು ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.

ಕೇಂದ್ರ ಸರ್ಕಾರದ 15ನೇ ಹಣಕಾಸಿನ ಯೋಜನೆ ಮೂಲಕ ಆರೋಗ್ಯ ಇಲಾಖೆಯ ಆಯುಷ್ಮಾನ್ ಸ್ವಾಸ್ಥ್ಯ ಯೋಜನೆ ವತಿಯಿಂದ ಸುಮಾರು 40 ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಪ್ರಾಯೋಗಿಕವಾಗಿ ಹೊನ್ನಮಾರನಹಳ್ಳಿ ಗ್ರಾಮದಲ್ಲಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ನೂತನ ಆರೋಗ್ಯ ಕಟ್ಟಡ ನಿರ್ಮಾಣದಿಂದ ಗ್ರಾಮಸ್ಥರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಲಿದೆ ಹೋಬಳಿ ಕೇಂದ್ರದಲ್ಲಿ ಜನರಿಗೆ ಉತ್ತಮ ಆರೋಗ್ಯ ಕಲ್ಪಿಸುವ ದೃಷ್ಟಿಯಿಂದ ಸುಮಾರು 5 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಮಾಡಲಾಗಿದೆ ಜೊತೆಗೆ ತಜ್ಞ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಆರೋಗ್ಯ ಇಲಾಖೆಯ ಕೆಲವು ಆದೇಶಗಳಿಂದ ತಜ್ಞ ವೈದ್ಯರುಗಳನ್ನು ಹೋಬಳಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸುವಂತೆ ಒತ್ತಾಯ ಮಾಡಿದರು.

ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ನಿರ್ಮಾಣಕ್ಕೆ ಏಪ್ರಿಲ್ ನಂತರ ಅನುದಾನ ನೀಡಲಾಗುತ್ತದೆ ಜೊತೆಗೆ ಗ್ರಾಮದ ಮುಖ್ಯ ರಸ್ತೆಯ ಅಭಿವೃದ್ಧಿಗೆ 500 ಮೀಟರ್ ಕಾಂಕ್ರೀಟ್ ರಸ್ತೆ ಆದ್ಯತೆ ಜೊತೆಗೆ ಈಗಾಗಲೇ ಗ್ರಾಮದಲ್ಲಿ ಶೇಕಡ 75ರಷ್ಟು ವಿವಿಧ ಬಡಾವಣೆಗಳ ರಸ್ತೆ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸುವ ಮೂಲಕ ಅಭಿವೃದ್ಧಿಪಡಿಸಲಾಗಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಟಿ ಎ ಪಿ ಎಂ ಎಸ್ ನಿರ್ದೇಶಕ ತೋಟಿ ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್ ಯಾದವ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಎಚ್ ಬಿ ರಂಗಸ್ವಾಮಿ, ಮಾಜಿ ಅಧ್ಯಕ್ಷರುಗಳಾದ ವಿಠಲ್ ಕುಮಾರ್, ಎನ್ ಆರ್ ಶಿವಕುಮಾರ್, ಹೊನ್ನೇಗೌಡ, ಎನ್ ಎಸ್ ಮಂಜುನಾಥ್, ಕೃಷಿ ಪತ್ತಿನ ನಿರ್ದೇಶಕ ಪಟೇಲ್ ಕುಮಾರ್, ವೈದ್ಯಾಧಿಕಾರಿ ಡಾ. ಪ್ರವೀಣ್, ಮುಖಂಡರಾದ ಬೋರೇಗೌಡ, ಶೇಖರ್, ರಾಜೇಗೌಡ, ಜಯರಾಮ್, ಮಾಸ್ತಿಗೌಡ, ಪೋಲಿಸ್ ನಾರಾಯಣಗೌಡ, ಚಂದ್ರು, ಸುಹಿಲ್, ಗುತ್ತಿಗೆದಾರರಾದ ಸಂದೀಪ್, ಮನೋಜ್, ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.