ಹಾಸನ: ಜಮೀನು ವಿಚಾರದ ಗಲಾಟೆ ಹಿನ್ನೆಲೆಯಲ್ಲಿ ಅಣ್ಣ ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿದ್ದ ಕಾಫಿ ಫಸಲಿಗೆ ತಮ್ಮನೇ ಬೆಂಕಿ ಹಾಕಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ಗ್ರಾಮದಲ್ಲಿ ನಡೆದಿದೆ. ಈ ಅವಘಡದಲ್ಲಿ ಸುಮಾರು 50 ಚೀಲ ಕಾಫಿ ಫಸಲು ಬೆಂಕಿಗಾಹುತಿಯಾಗಿದೆ.
ಬೈಕೆರೆ ಗ್ರಾಮದ ನಿವಾಸಿ ಎಸ್.ಬಿ. ಸುರೇಶ್ ಅವರು ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿಟ್ಟಿದ್ದ ಕಾಫಿಯನ್ನು ಅವರ ತಮ್ಮ ಪ್ರಕಾಶ್ ಹಾಗೂ ಆತನ ಪುತ್ರ ರಾಕೇಶ್ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಜಮೀನು ವಿಚಾರಕ್ಕೆ ಸಂಬಂಧಿಸಿದ ಹಳೆಯ ವೈಷಮ್ಯದಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಸಕಲೇಶಪುರ ಜಗದಾಂಬ ಸ್ಟೋರ್ ಮಾಲೀಕ ಪ್ರಕಾಶ್ ಹಾಗೂ ಪುತ್ರ ರಾಕೇಶ್ ವಿರುದ್ಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಫಿ ಫಸಲಿಗೆ ಬೆಂಕಿ ಹಚ್ಚಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.










