ಹಾಸನ: ಆಲೂರು ತಾಲ್ಲೂಕಿನ ಯಡೂರು ಗ್ರಾಮದಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.
ಎರಡನೇ ಮದುವೆ ವಿಚಾರವಾಗಿ ಪ್ರಶ್ನೆ ಮಾಡಿದ ಕಾರಣಕ್ಕೆ ಮೊದಲ ಪತ್ನಿ ರಾಧಾ (40) ಅವರನ್ನು ಪತಿ ಕುಮಾರ್ ಹತ್ಯೆ ಮಾಡಿ, ಶವವನ್ನು ಯಗಚಿ ನದಿಗೆ ಎಸೆದಿರುವ ಘಟನೆ ಜನವರಿ 10ರ ರಾತ್ರಿ ನಡೆದಿರುವುದಾಗಿ ತಿಳಿದುಬಂದಿದೆ.
ಮೃತ ರಾಧಾ ಕಳೆದ ನಾಲ್ಕು ವರ್ಷಗಳಿಂದ ಪತಿಯಿಂದ ಬೇರ್ಪಟ್ಟು ವಾಸವಾಗಿದ್ದರು. ಈ ನಡುವೆ ಜನವರಿ ಮೊದಲ ವಾರದಲ್ಲಿ ಕುಮಾರ್ ಶಬರಿಮಲೆಗೆ ತೆರಳಿದ್ದು, ಇರುಮುಡಿ ಕಟ್ಟುವ ವೇಳೆ ಪತ್ನಿಯ ಸ್ಥಾನದಲ್ಲಿ ಮತ್ತೊಬ್ಬ ಮಹಿಳೆ ಪೂಜೆ ಸಲ್ಲಿಸಿರುವ ಮಾಹಿತಿ ರಾಧಾಗೆ ಲಭ್ಯವಾಗಿತ್ತು. ಈ ವಿಚಾರವನ್ನು ಪ್ರಶ್ನಿಸಲು ಶನಿವಾರ ರಾತ್ರಿ ರಾಧಾ ಯಡೂರಿಗೆ ಬಂದಿದ್ದಾಳೆ ಎನ್ನಲಾಗಿದೆ.
ಇದೇ ವಿಚಾರವಾಗಿ ಗಲಾಟೆ ನಡೆದಿದ್ದು, ಅದೇ ರಾತ್ರಿ ರಾಧಾಳನ್ನು ಪತಿ ಕುಮಾರ್ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಹಾಸನ ತಾಲ್ಲೂಕಿನ ಕಂದಲಿ ಸಮೀಪದ ಯಗಚಿ ನದಿಗೆ ಶವವನ್ನು ಬಿಸಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪತಿ ಕುಮಾರ್ ಹಾಗೂ ಆತನ ಮನೆಯವರು ಸೇರಿ ಹತ್ಯೆ ನಡೆಸಿದ್ದಾರೆ ಎಂದು ರಾಧಾ ಕುಟುಂಬದವರು ಆರೋಪಿಸಿದ್ದಾರೆ. ನೆನ್ನೆ ತಾನೇ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಂದು ಪೊಲೀಸರು ಯಗಚಿ ನದಿಯಿಂದ ರಾಧಾಳ ಮೃತದೇಹವನ್ನು ಹೊರತೆಗೆದಿದ್ದಾರೆ.
ಈ ಘಟನೆ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೃತಳ ಕುಟುಂಬದವರು ಆಗ್ರಹಿಸಿದ್ದಾರೆ.










