ಬೆಂಗಳೂರು: ರಾಮಮೂರ್ತಿ ನಗರದಲ್ಲಿ ನಡೆದ ಟೆಕ್ಕಿ ಶರ್ಮಿಳಾ ಡಿಕೆ ನಿಗೂಢ ಸಾವು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮೊದಲಿಗೆ ಮನೆಗೆ ಬೆಂಕಿ ತಗುಲಿ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿತ್ತು.
ಆದರೆ ಪೊಲೀಸರ ತನಿಖೆಯಲ್ಲಿ ಶರ್ಮಿಳಾವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಲ್ ಕುರೈ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆತನೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಯಾರು ಕರ್ನಲ್ ಕುರೈ?
ಮೃತ ಶರ್ಮಿಳಾ ವಾಸವಿದ್ದ ಫ್ಲಾಟ್ನ ಪಕ್ಕದ ಮನೆಯಲ್ಲೇ ಕರ್ನಲ್ ಕುರೈ ವಾಸವಾಗಿದ್ದ. ಕೇರಳ ಮೂಲದ ಈತ ಪಿಯುಸಿ ಓದುತ್ತಿದ್ದ ವಿಜ್ಞಾನ ವಿದ್ಯಾರ್ಥಿ. ಕಳೆದ ಎರಡು ವರ್ಷಗಳಿಂದ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಲೇಔಟ್ನಲ್ಲಿ ಶರ್ಮಿಳಾ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಶರ್ಮಿಳಾಗೆ ಪಕ್ಕದ ಮನೆ ವಾಸಿಯಾಗಿದ್ದ ಕಾರಣ ಕರ್ನಲ್ ಕುರೈಗೆ ಮುಖ ಪರಿಚಯವಿತ್ತು. ಆದರೆ ಆ ಪರಿಚಯವೇ ಏಕಪಕ್ಷೀಯ ಪ್ರೀತಿಗೆ ತಿರುಗಿತ್ತು.
ವಯಸ್ಸಿನ ಭಾರೀ ಅಂತರ
ಶರ್ಮಿಳಾಗೆ 34 ವರ್ಷವಾಗಿದ್ದರೆ, ಕರ್ನಲ್ ಕುರೈಗೆ ಕೇವಲ 18 ವರ್ಷ. ವಯಸ್ಸಿನಲ್ಲಿ 16 ವರ್ಷದ ಅಂತರ ಇದ್ದರೂ, ಕರ್ನಲ್ ಶರ್ಮಿಳಾ ಹಿಂದೆ ಬಿದ್ದಿದ್ದ. ಈ ವಿಷಯ ಶರ್ಮಿಳಾಗೆ ತಿಳಿದೇ ಇರಲಿಲ್ಲ. ಇದು ಸಂಪೂರ್ಣವಾಗಿ ಒನ್ಸೈಡ್ ಲವ್ ಆಗಿತ್ತು.
ಜನವರಿ 3ರಂದು ಕರ್ನಲ್ ಕುರೈ ಹಠಾತ್ ಆಗಿ ಶರ್ಮಿಳಾ ಮನೆಗೆ ಪ್ರವೇಶಿಸಿದ್ದ. ಟೆರಸ್ ಮೂಲಕ ಮನೆಯೊಳಗೆ ನುಗ್ಗಿದ ಆತ, ಯಾವುದೇ ಅನುಮತಿ ಪಡೆಯದೇ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಶರ್ಮಿಳಾ ವಿರೋಧ ವ್ಯಕ್ತಪಡಿಸಿ ಜೋರಾಗಿ ಕೂಗಿದಾಗ ಕೋಪಗೊಂಡ ಕರ್ನಲ್, ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಬೆಡ್ರೂಮಿನಲ್ಲಿ ಬೆಡ್ಶೀಟ್ಗೆ ಬೆಂಕಿ ಹಚ್ಚಿ, ಮನೆಗೆ ಬೆಂಕಿ ಅವಘಡವಾದಂತೆ ತೋರಿಸಲು ಯತ್ನಿಸಿ ಅಲ್ಲಿಂದ ಪರಾರಿಯಾಗಿದ್ದ. ಮನೆಗೆ ಬೆಂಕಿ ತಗುಲಿರುವುದನ್ನು ಗಮನಿಸಿದ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದಾಗ ಶರ್ಮಿಳಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಕೇಸ್ ಹೇಗೆ ಬಯಲಾಯಿತು?
ಘಟನೆ ಬಳಿಕ ಕರ್ನಲ್ ಕುರೈ ಒಂದು ವಾರ ಪಕ್ಕದ ಮನೆಯಲ್ಲೇ ಇದ್ದು, ತನಗೇನೂ ಗೊತ್ತಿಲ್ಲದಂತೆ ವರ್ತಿಸಿದ್ದ. ಸಿಸಿಟಿವಿ ಇಲ್ಲ, ಫೋನ್ ಕರೆ ದಾಖಲೆಗಳಿಲ್ಲ, ಎಲ್ಲ ಸಾಕ್ಷ್ಯಗಳು ಬೆಂಕಿಯಲ್ಲಿ ನಾಶವಾಗಿದೆ ಎಂದು ಭಾವಿಸಿ ತಾನು ಸಿಕ್ಕಿಬೀಳುವುದಿಲ್ಲ ಎಂದುಕೊಂಡಿದ್ದ. ವಿಜ್ಞಾನ ವಿದ್ಯಾರ್ಥಿಯಾಗಿದ್ದ ಕಾರಣ, ಬೆಂಕಿಯಿಂದ ಸಾಕ್ಷ್ಯ ಸಿಗುವುದಿಲ್ಲ ಎಂಬ ತಪ್ಪು ನಂಬಿಕೆ ಆತನಲ್ಲಿತ್ತು.
ಆದರೆ ಕೊಲೆ ಬಳಿಕ ಶರ್ಮಿಳಾ ಮೊಬೈಲ್ನ್ನು ತೆಗೆದುಕೊಂಡಿದ್ದ ಕರ್ನಲ್, ಮೂರು ದಿನಗಳ ನಂತರ ಅದರಲ್ಲಿ ತನ್ನ ಸಿಮ್ ಹಾಕಿ ಫೋನ್ ಆನ್ ಮಾಡಿದ್ದಾನೆ. ಈಗಾಗಲೇ ಶರ್ಮಿಳಾ ಮೊಬೈಲ್ ಟ್ರ್ಯಾಕ್ಗೆ ಇಟ್ಟಿದ್ದ ಪೊಲೀಸರು, ಸಿಗ್ನಲ್ ಸಿಕ್ಕ ತಕ್ಷಣ ಆರೋಪಿ ಹತ್ತಿರಕ್ಕೆ ತಲುಪಿದ್ದಾರೆ. ಟವರ್ ಡಂಪ್ ಮಾಹಿತಿ ಕೊಲೆ ನಡೆದ ಪಕ್ಕದ ಮನೆಯನ್ನೇ ತೋರಿಸಿದ್ದು, ಸಿಮ್ ಕರ್ನಲ್ ಕುರೈಯದ್ದೇ ಎಂದು ದೃಢಪಟ್ಟಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಕರ್ನಲ್ ಕುರೈಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ರಹಸ್ಯ ಸಂಪೂರ್ಣವಾಗಿ ಬಯಲಾಗಿದೆ.










