ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನೊಬ್ಬ ತನ್ನದೇ ತಂದೆಯನ್ನು ಬರ್ಬರವಾಗಿ ಹತ್ಯೆಗೈದ ಭೀಕರ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಸತೀಶ್ (60) ಎಂದು ಗುರುತಿಸಲಾಗಿದ್ದು, ಪುತ್ರ ರಂಜಿತ್ (28) ತಂದೆಯನ್ನು ಕೊಲೆ ಮಾಡಿರುವ ಆರೋಪಿ.
ಪ್ರಾಥಮಿಕ ಮಾಹಿತಿ ಪ್ರಕಾರ, ಸತೀಶ್ ಕುಟುಂಬವನ್ನು ಸರಿಯಾಗಿ ನಿರ್ವಹಣೆ ಮಾಡದೇ ಅಕ್ರಮ ಸಂಬಂಧ ಹೊಂದಿದ್ದರಿಂದ ಕುಟುಂಬದಲ್ಲಿ ನಿರಂತರ ಕಲಹ ನಡೆಯುತ್ತಿತ್ತು. ಇದರಿಂದ ಬೇಸತ್ತ ರಂಜಿತ್ ಹಾಗೂ ಆತನ ತಾಯಿ ಪ್ರತ್ಯೇಕವಾಗಿ ವಾಸವಾಗಿದ್ದು, ತಾಯಿ–ಮಗ ಕೆ.ಆರ್.ನಗರದಲ್ಲಿ ನೆಲೆಸಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ತಂದೆ–ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ನಿನ್ನೆ ರಾತ್ರಿ ಗಲಾಟೆ ತಾರಕಕ್ಕೇರಿದೆ. ಜಗಳದ ವೇಳೆ ರಂಜಿತ್ ಸ್ಟೀಲ್ ರಾಡ್ನಿಂದ ತಂದೆಯ ತಲೆಗೆ ಹೊಡೆದು ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.










