ಮಾಡಾಳು: ಲಿಂಗಾಯತ ಎಂದೆಂದಿಗೂ ಪ್ರತ್ಯೇಕ ಧರ್ಮ ಸಾಣೇನಹಳ್ಳಿ ಸ್ವಾಮೀಜಿ ಪ್ರತಿಪಾದನೆ । ಮಾಡಾಳು ಗ್ರಾಮದಲ್ಲಿ 26ನೇ ಅರಿವಿನ ಜಾಗೃತಿ

Sri Panditaradhya Swamiji, the presiding dean of the Taralabalu Sanehalli Mutt, asserted that Lingayat will always be a separate religion, whether governments agree or not.

ಮಾಡಾಳು: ಸರ್ಕಾರಗಳು ಒಪ್ಪಲಿ ಅಥವಾ ಒಪ್ಪದೇ ಇರಲಿ ಲಿಂಗಾಯತ ಯಾವತ್ತಿಗೂ ಪ್ರತ್ಯೇಕ ಧರ್ಮವೆಂದು ತರಳಬಾಳು ಸಾಣೇಹಳ್ಳಿ ಮಠದ ಪೀಠಾಧ್ಯಕ್ಷ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಪ್ರತಿಪಾದಿಸಿದರು.

ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ನಿರಂಜನ ಪೀಠದ ಲಿಂಗೈಕ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ 19ನೇ ಪುಣ್ಯ ಸರಣೋತ್ಸವ ಮತ್ತು 26ನೇ ಅರಿವಿನ ಜಾಗೃತಿ ಹಾಗು ನೂತನ ವಿದ್ಯಾರ್ಥಿ ನಿಲಯದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಶ್ರೀಗಳು ಸಮಾಜವನ್ನು ಜಾಗೃತಿಗೊಳಿಸಬೇಕಾದ ಮಠಗಳೇ ಸಮಾಜಕ್ಕೆ ತಪ್ಪು ದಾರಿ ತೋರುತ್ತಿರುವುದು ಬೇಸರದ ಸಂಗತಿ ಎಂದರು.

ನಿಷ್ಠೆ ಮತ್ತು ನಿಷ್ಟುರತೆ ಪ್ರಸ್ತುತ ಸಮಾಜದಲ್ಲಿ ಮರೆಯಾಗುತ್ತಿದೆ. ಬೆಳಕು ನೀಡುವುದಕ್ಕಿಂತ ಬೆಂಕಿ ಹಚ್ಚುವರ ಸಂಖ್ಯೆ ಹೆಚ್ಚಾಗುತ್ತಿದೆ. ಏಕ ನಿಷ್ಠೆಯೇ ಲಿಂಗಾಯತ ಧರ್ಮದ ಮೂಲತತ್ವ ಎಂಬುದನ್ನ ಮರೆಯಬಾರದು. ಗಣಾಚಾರದಿಂದ ಮಾತ್ರ ಸ್ಪಷ್ಟತೆ ದೊರೆಯಲಿದೆಯೆಂದು ಲಿಂಗಾಯತ ಧರ್ಮದ ಅನುಯಾಯಿಗಳಿಗೆ ಕರೆ ನೀಡಿದರು.

ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಅವರು ಮಾತನಾಡಿ, ರಾಜಕಾರಣಿಗಳು ಹಾಗು ಸರ್ಕಾರ ದಾರಿ ತಪ್ಪಿದ ಸಂದರ್ಭದಲ್ಲಿ ಮಠಾಧೀಶರು ಎಚ್ಚರಿಸುವ ಕೆಲಸ ಮಾಡಬೇಕಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಠಾಧೀಶರ ಮಾರ್ಗದರ್ಶನ ಅವಶ್ಯಕತೆ ಹೆಚ್ಚಿದೆಯೆಂದರು.

ನಾಡಿನ ಮಠ ಮಂದಿರಗಳು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ್ದರಿಂದ ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ಮಕ್ಕಳಿಗೆ ಸಹಕಾರಿಯಾಗಿದೆ. ಶೈಕ್ಷಣಿಕವಾಗಿ ರಾಜ್ಯ ಮುಂದಿದೆ ಅಂದರೆ ಅದಕ್ಕೆ ರಾಜ್ಯದ ವಿವಿಧ ಮಠಾಧೀಶರ ಕೊಡುಗೆ ಅಪಾರವಾಗಿದೆಯೆಂದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಮಾತನಾಡಿ, ಲಿಂಗೈಕ್ಯ ಚಂದ್ರಶೇಖರ ಸ್ವಾಮೀಜಿ ಅವರು ಪವಾಡ ಪುರುಷರಾಗಿದ್ದರು. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ನಾನು ಸ್ಪರ್ಧಿಸಿದ ಸಂದರ್ಭದಲ್ಲಿ ಅವರ ಆಶೀರ್ವಾದ ಪಡೆಯಲು ಮಠಕ್ಕೆ ಆಗಮಿಸಿದಾಗ ಕಣಕಟ್ಟೆ ಹೋಬಳಿಗೆ ನೀರು ತಗೊಂಡು ಬಾರಯ್ಯ ಎಂಬ ಆಶೀರ್ವಾದದೊಂದಿಗೆ ಆದೇಶ ಮಾಡಿದ್ದರು.

ಇಂದು ಅವರ ಆಶೀರ್ವಾದ ಫಲಿಸಿದ್ದು ಕಣಕಟ್ಟೆ ಹೋಬಳಿಯ ಕೆರೆಕಟ್ಟೆಗಳಲ್ಲಿ ಹೇಮಾವತಿ ನೀರು ತುಂಬಿರುವುದೇ ಸಾಕ್ಷಿ ಎಂದರು.

ಸಮಾರಂಭದಲ್ಲಿ ಕೆರಗೋಡಿ ರಂಗಾಪುರ ಮಠದ ಗುರು ಪರದೇಶಿ ಕೇಂದ್ರ ಸ್ವಾಮೀಜಿ, ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಪಾಂಡುಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ, ಕನಕಗಿರಿ ಮಠದ ಚನ್ನಮಲ್ಲ ಸ್ವಾಮೀಜಿ, ಡಿ.ಎಂ.ಕುರ್ಕೆ ಬೂದಿಹಾಳ್‌ ವಿರಕ್ತಮಠದ ಶಶಿಕರ ಸಿದ್ದ ಬಸವ ಸ್ವಾಮೀಜಿ, ಮಾರ್ಗೊಂಡನಹಳ್ಳಿ ಮಠದ ಅಭಿನವ ಬಸವಲಿಂಗ ಸ್ವಾಮೀಜಿ, ಸಂಸದ ಶ್ರೇಯಸ್‌‍ ಪಟೇಲ್‌, ಸಾಹಿತಿ ಚಟ್ನಳ್ಳಿ ಮಹೇಶ್‌, ಚಲನಚಿತ್ರ ನಟ ಚೇತನ್‌, ಕಾಂಗ್ರೆಸ್‌‍ ಮುಖಂಡ ಜಿ.ಬಿ.ಶಶಿಧರ್‌ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್‌‍.ಪಿ.ಸ್ವಾಮಿ, ವೀರಶೈವ ಸಮಾಜ ಮುಖಂಡ ಎನ್‌.ಜಿ. ಮರಳು ಸಿದ್ದಸ್ವಾಮಿ ನಾಗಸಮುದ್ರ, ಶಿವಕುಮಾರ್‌, ಓಂಕಾರ ಮೂರ್ತಿ ಉಪಸ್ಥಿತರಿದ್ದರು.

Sri Panditaradhya Swamiji, the presiding dean of the Taralabalu Sanehalli Mutt, asserted that Lingayat will always be a separate religion, whether governments agree or not.