ಬೆಂಗಳೂರು: ಮಕ್ಕಳ WhatsApp ಬಳಕೆ ಪೋಷಕರ ನಿಯಂತ್ರಣದಲ್ಲಿ! ಹೊಸ ಫೀಚರ್‌ಗೆ ಸಿದ್ಧತೆ

ಬೆಂಗಳೂರು: ಮೊಬೈಲ್‌ಗೆ ಅಂಟಿಕೊಂಡಿರುವ ಇಂದಿನ ಮಕ್ಕಳನ್ನು ನಿಯಂತ್ರಿಸುವುದು ಪೋಷಕರಿಗೆ ದೊಡ್ಡ ಸವಾಲಾಗಿದೆ. ಈ ಹಿನ್ನೆಲೆ, ಮಕ್ಕಳ ಸುರಕ್ಷತೆ ಹಾಗೂ ಪೋಷಕರ ನಿಯಂತ್ರಣಕ್ಕೆ ಅನುಕೂಲವಾಗುವ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲು WhatsApp ದಿಟ್ಟ ಹೆಜ್ಜೆ ಇಟ್ಟಿದೆ.

ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ (ಸೆಕೆಂಡ್) WhatsApp ಅಕೌಂಟ್ ಲಭ್ಯವಾಗಲಿದೆ. ಈ ಖಾತೆಯ ಸಂಪೂರ್ಣ ನಿಯಂತ್ರಣ ಪೋಷಕರ ಕೈಯಲ್ಲೇ ಇರುತ್ತದೆ. WABetaInfo ವರದಿ ಪ್ರಕಾರ, ಈ ಹೊಸ ಫೀಚರ್ WhatsApp Android Beta ಆವೃತ್ತಿ 2.26.1.30ರಲ್ಲಿ ಪತ್ತೆಯಾಗಿದೆ.

ಪ್ರಸ್ತುತ ಇದು ಅಭಿವೃದ್ಧಿ ಹಂತದಲ್ಲಿದ್ದು, ಸಾಮಾನ್ಯ ಬಳಕೆದಾರರಿಗೆ ಇನ್ನೂ ಲಭ್ಯವಾಗಿಲ್ಲ. ಮಕ್ಕಳ ಆನ್‌ಲೈನ್ ಸುರಕ್ಷತೆ ಖಚಿತಪಡಿಸಿಕೊಳ್ಳುವುದೇ ಈ ಹೊಸ ಕ್ರಮದ ಮುಖ್ಯ ಉದ್ದೇಶ.

ಸೆಕೆಂಡ್ WhatsApp ಅಕೌಂಟ್ ಹೇಗೆ ಕೆಲಸ ಮಾಡುತ್ತದೆ..?

*ಮಕ್ಕಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ಫೀಚರ್ಸ್
*ಅಗತ್ಯವಿರುವ ಕೆಲವೇ ಕೆಲವು ಆಯ್ಕೆಗಳಿಗೆ ಸೀಮಿತ ಬಳಕೆ
*ಪೋಷಕರ ಪ್ರೈಮರಿ ಅಕೌಂಟ್‌ಗೆ ಲಿಂಕ್ ಆಗಿರುವ ವ್ಯವಸ್ಥೆ
*ಚಾಟ್ ಮತ್ತು ಕರೆಗಳ ಗೌಪ್ಯತೆ ಕಾಪಾಡುವ ವ್ಯವಸ್ಥೆ
*ಪೋಷಕರ ಮತ್ತು ಮಕ್ಕಳ ಪ್ರೊಫೈಲ್‌ಗಳ ನಡುವೆ ಸ್ಪಷ್ಟ ಸಂಪರ್ಕ

ಇದರ ಉದ್ದೇಶವೇನು..?

ಈ ದ್ವಿತೀಯ ಖಾತೆಯ ಮುಖ್ಯ ಉದ್ದೇಶ ಮಕ್ಕಳ WhatsApp ಬಳಕೆಯನ್ನು ಪೋಷಕರ ನಿಯಂತ್ರಣದಲ್ಲಿ ಇಡುವುದು. ಉದಾಹರಣೆಗೆ, ಮಕ್ಕಳು ಸೇವ್ ಮಾಡಿರುವ ಸಂಪರ್ಕ ಸಂಖ್ಯೆಗಳಿಗಷ್ಟೇ ಮೆಸೇಜ್ ಕಳುಹಿಸಲು ಹಾಗೂ ಕರೆ ಮಾಡಲು ಅನುಮತಿ ನೀಡಬಹುದಾಗಿದೆ. ಇದರಿಂದ ಅಪರಿಚಿತರ ಸಂಪರ್ಕದ ಅಪಾಯವನ್ನು ತಪ್ಪಿಸಬಹುದು.

ಪ್ರಸ್ತುತ WhatsAppನಲ್ಲಿ ಸಂದೇಶ ಹಾಗೂ ಕರೆಗಳ ಮೇಲೆ ನೇರ ನಿಯಂತ್ರಣಕ್ಕೆ ಅವಕಾಶ ಇಲ್ಲ. ಆದರೆ ಈ ಹೊಸ ಫೀಚರ್ಸ್ ಬಂದ ನಂತರ, ಪೋಷಕರು ಮಕ್ಕಳ ವಯಸ್ಸಿಗೆ ತಕ್ಕಂತೆ ಬಳಕೆಗೆ ಮಿತಿಗಳನ್ನು ನಿಗದಿಪಡಿಸಬಹುದಾಗಿದೆ.

WhatsApp ಇನ್ನೂ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೂ ಈ ಫೀಚರ್ ಬಂದ ಬಳಿಕ, ಮಕ್ಕಳು WhatsApp ಅನ್ನು ಹೆಚ್ಚು ಸುರಕ್ಷಿತವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸಲು ಸಹಾಯವಾಗಲಿದೆ.