ಬೆಂಗಳೂರು : SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ಟರೆ ಪ್ರಶ್ನೆ ಪತ್ರಿಕೆ ಸಿಗುತ್ತದೆ ಎಂಬ ಸುಳ್ಳು ಪ್ರಚಾರಕ್ಕೆ ಮೋಸ ಹೋಗಬೇಡಿ

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಗೇಡಿಗಳ ಹಾವಳಿ ಹೆಚ್ಚಾಗಿದೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತೇವೆ ಎಂದು ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಪೋಸ್ಟ್‌ಗಳು, ವೀಡಿಯೊಗಳು ಹಾಗೂ ಬಯೋಗಳಲ್ಲಿ ಜಾಹೀರಾತು ಹಾಕಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುವ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ನೂರು ರೂಪಾಯಿ ಕೊಟ್ಟರೆ ಪ್ರಶ್ನೆ ಪತ್ರಿಕೆ ಎಂಬ ಮೋಸ

ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಹಂತದ ಪೂರ್ವಸಿದ್ಧತಾ ಪರೀಕ್ಷೆಗಳು ಆರಂಭವಾಗಿದ್ದು, ಮಾರ್ಚ್‌ನಿಂದ ಮುಖ್ಯ ಪರೀಕ್ಷೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಕೆಲ ಕಿಡಗೇಡಿಗಳು ಎಸ್‌ಎಸ್‌ಎಲ್‌ಸಿ ಹಾಗೂ ಪೂರ್ವಭಾವಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತೇವೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. 100 ರೂಪಾಯಿ ಫೋನ್‌ಪೇ ಅಥವಾ ಆನ್‌ಲೈನ್ ಮೂಲಕ ಪಾವತಿಸಿದರೆ ಪ್ರಶ್ನೆ ಪತ್ರಿಕೆ ಕಳುಹಿಸುತ್ತೇವೆ ಎಂದು ನಂಬಿಸಿ ವಿದ್ಯಾರ್ಥಿಗಳನ್ನು ಮೋಸಗೊಳಿಸಲಾಗುತ್ತಿದೆ. ಈ ರೀತಿ ಹರಿದಾಡುತ್ತಿರುವ ಪ್ರಶ್ನೆ ಪತ್ರಿಕೆಗಳು ಸಂಪೂರ್ಣ ನಕಲಿಯಾಗಿದ್ದು, ವಿದ್ಯಾರ್ಥಿಗಳು ಹಣದ ಜೊತೆಗೆ ಅಮೂಲ್ಯ ಸಮಯವನ್ನೂ ಕಳೆದುಕೊಳ್ಳುತ್ತಿದ್ದಾರೆ.

ವಿದ್ಯಾರ್ಥಿಗಳಲ್ಲಿ ಆತಂಕ

ಈ ವದಂತಿಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದು, ಶಿಕ್ಷಣ ಇಲಾಖೆಯ ಮೇಲೆಯೇ ಕಿಡಗೇಡಿಗಳು ಸವಾಲು ಹಾಕಿದಂತೆ ವರ್ತಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಲೀಕ್ ಎಂಬ ಮಾತು ಕೇಳಿ ಆತುರಕ್ಕೆ ಒಳಗಾಗಿ ಯಾರೂ ಮೋಸ ಹೋಗಬಾರದು ಎಂದು ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕಿಡಗೇಡಿಗಳ ವಿರುದ್ಧ ದೂರು

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲಾ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಸಂಘಟನೆಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿವೆ. ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಸುಳ್ಳು ಪ್ರಚಾರಕ್ಕೆ ಬಲಿಯಾಗದೆ ಅಧಿಕೃತ ಮಾಹಿತಿಯನ್ನಷ್ಟೇ ನಂಬಬೇಕು ಎಂದು ಮನವಿ ಮಾಡಲಾಗಿದೆ.