20.3 C
Munich
Home ಮನರಂಜನೆ ‘ಸೀತಾ ಪಯಣ’ ಚಿತ್ರದ ‘ಅಸಲಿ ಸಿನಿಮಾ’ ಹಾಡು ಬಿಡುಗಡೆ!

‘ಸೀತಾ ಪಯಣ’ ಚಿತ್ರದ ‘ಅಸಲಿ ಸಿನಿಮಾ’ ಹಾಡು ಬಿಡುಗಡೆ!

'ಸೀತಾ ಪಯಣ' ಚಿತ್ರದ 'ಅಸಲಿ ಸಿನಿಮಾ' ಹಾಡು ಬಿಡುಗಡೆ!

ಬಹುಮುಖ ಪ್ರತಿಭೆ, ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಸೀತಾ ಪಯಣ’. ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗಿದ್ದು, ಇದೀಗ ಚಿತ್ರದ ಬಹುನಿರೀಕ್ಷಿತ ‘ಅಸಲು ಸಿನಿಮಾ..’ ಹಾಡು ಬಿಡುಗಡೆಯಾಗಿದೆ. “ಆಹಾ ಓಹೋ ಅಂತಾರೋ… ಚೆಲುವಿ ನೀನೇ ಅಂತಾರೋ… ಲುಕ್‌ಅಲ್ಲಿ ಬಬ್ಲಿ ಅಂತಾರೋ.. ಕಣ್ಣಲ್ಲಿ ಕ್ರೇಜಿ ಅಂತಾರೋ” ಎಂಬ ಆಕರ್ಷಕ ಸಾಲುಗಳೊಂದಿಗೆ ಶುರುವಾಗುವ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಖ್ಯಾತ ಸಾಹಿತಿ ಭರತ್‌ ಜನನಿ ಈ ಹಾಡಿಗೆ ಸಾಹಿತ್ಯ ಬರೆಯುವ ಮೂಲಕ ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಮಾಡ್ತಿದ್ದಾರೆ. ಗಾಯಕಿ ಅನುರಾಧಾ ಭಟ್ ತಮ್ಮ ಸುಮಧುರ ಧ್ವನಿಯಲ್ಲಿ ಹಾಡಿದ್ದಾರೆ. ಮೆಲೋಡಿ ಕಿಂಗ್ ಅನೂಪ್ ರೂಬೆನ್ಸ್ ಅವರ ಪೆಪ್ಪಿ ಟ್ಯೂನ್‌ಗಳು ಈ ಹಾಡಿನ ಮೆರುಗನ್ನು ಹೆಚ್ಚಿಸಿವೆ.

ಈ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ನಾಯಕಿಯಾಗಿ ಮಿಂಚುತ್ತಿದ್ದು, ಅವರ ಗ್ಲಾಮರ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಹಾಡಿನಲ್ಲಿ ಎದ್ದುಕಾಣುತ್ತಿದೆ. ಚಿತ್ರದಲ್ಲಿ ನಿರಂಜನ್ ನಾಯಕನಾಗಿ ನಟಿಸಿದ್ದು, ಪೋಷಕ ಪಾತ್ರಗಳಲ್ಲಿ ದಿಗ್ಗಜ ನಟರಾದ ಸತ್ಯರಾಜ್, ಪ್ರಕಾಶ್ ರೈ ಮತ್ತು ಕೋವೈ ಸರಳಾ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅರ್ಜುನ್ ಸರ್ಜಾ ಒಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರ ಸೋದರಳಿಯ ಧ್ರುವ ಸರ್ಜಾ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

‘ಸೀತಾ ಪಯಣ’ ಚಿತ್ರವು ಪ್ರೇಮಿಗಳ ದಿನದ ಅಂಗವಾಗಿ ಫೆಬ್ರವರಿ 14ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಕಥೆ-ಚಿತ್ರಕಥೆ- ನಿರ್ಮಾಣ ಮತ್ತು ನಿರ್ದೇಶನ ಅರ್ಜುನ್ ಸರ್ಜಾ ಅವರದ್ದು. ಅನೂಪ್ ರೂಬೆನ್ಸ್ ಸಂಗೀತ, ಜಿ. ಬಾಲಮುರುಗನ್ ಛಾಯಾಗ್ರಹಣ, ಅಯೂಬ್ ಖಾನ್ ಸಂಕಲನ, ಅರ್ಜುನ್ ಸರ್ಜಾ ಸಾಹಸ, ಶ್ರಸ್ತಿ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

error: Content is protected !!