ಅರಸೀಕೆರೆ : ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಮಜ್ಜಿದ್ ಎ ಅಕ್ಸಾ ಉದ್ಘಾಟನೆಯನ್ನು ಕೋಡಿಮಠ ಶ್ರೀ ಕ್ಷೇತ್ರದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಗ್ರಾಮದ ಸರ್ವ ಧರ್ಮದವರು ಮಹಿಳೆಯರು ವಿದ್ಯಾರ್ಥಿಗಳು ಮಸೀದಿ ದರ್ಶನವನ್ನು ಮಾಡಿ, ಸಹಭೋಜನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಮಠ ಶ್ರೀ ಕ್ಷೇತ್ರದ ಶಿವಾನಂದ ಶಿವಯೋಗಿ ಸ್ವಾಮೀಜಿ, ಮಸೀದಿ, ಮಂದಿರ, ಚರ್ಚ್ ಎಂಬುವವು ಕೇವಲ ಧಾರ್ಮಿಕ ಕಟ್ಟಡಗಳಲ್ಲ. ಅವು ಮಾನವೀಯತೆಯನ್ನು ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ಧರ್ಮಗಳು ಬೇರೆಬೇರೆ ಇದ್ದರೂ ನಮ್ಮ ಗುರಿ ಒಂದೇ ಶಾಂತಿ, ಸಹಬಾಳ್ವೆ ಮತ್ತು ಮಾನವ ಕಲ್ಯಾಣ. ಹಾರನಹಳ್ಳಿ ಗ್ರಾಮದಲ್ಲಿ ಮಜ್ಜಿದ್ ಎ ಅಕ್ಸಾ ಉದ್ಘಾಟನೆ ಭಾವೈಕ್ಯತೆಗೆ ಹೊಸ ಸಂದೇಶ ನೀಡಿದೆ. ಎಲ್ಲ ಧರ್ಮದವರು ಪರಸ್ಪರ ಗೌರವದಿಂದ ಬದುಕಿದರೆ ಸಮಾಜ ಇನ್ನಷ್ಟು ಬಲಿಷ್ಠವಾಗುತ್ತದೆ” ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ,
ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿದೆ. ಇಲ್ಲಿ ಧರ್ಮ, ಜಾತಿ, ಭಾಷೆ ವಿಭಿನ್ನವಾದರೂ ನಮ್ಮ ಸಂವಿಧಾನ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಮಸೀದಿ ಉದ್ಘಾಟನೆಗೆ ವಿವಿಧ ಧರ್ಮದ ನಾಯಕರು ಒಂದೇ ವೇದಿಕೆಯಲ್ಲಿ ಭಾಗವಹಿಸಿರುವುದು ನಿಜವಾದ ರಾಷ್ಟ್ರೀಯ ಏಕತೆಗೆ ಉದಾಹರಣೆ. ಭಾವೈಕ್ಯತೆಯೇ ದೇಶದ ಭದ್ರತೆ ಮತ್ತು ಪ್ರಗತಿಯ ಮೂಲ ಎಂದು ಅಭಿಪ್ರಾಯಪಟ್ಟರು.
ಶಾಸಕ ಹಾಗೂ ರಾಜ್ಯ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಮಾತನಾಡಿ, ಗ್ರಾಮೀಣ ಭಾರತದಲ್ಲಿ ಸಹೋದರತ್ವ ಮತ್ತು ಸೌಹಾರ್ದತೆ ಇನ್ನೂ ಜೀವಂತವಾಗಿದೆ. ಹಾರನಹಳ್ಳಿಯಲ್ಲಿ ಮಸೀದಿ ದರ್ಶನಕ್ಕೆ ಎಲ್ಲ ಧರ್ಮದ ಜನರು ಆಗಮಿಸಿರುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯ. ಧರ್ಮವು ಮನುಷ್ಯನನ್ನು ವಿಭಜಿಸುವುದಕ್ಕಲ್ಲ, ಒಗ್ಗೂಡಿಸುವುದಕ್ಕಿದೆ ಎಂಬುದನ್ನು ಇಂತಹ ಕಾರ್ಯಕ್ರಮಗಳು ಸಾರುತ್ತವೆ ಎಂದು ಹೇಳಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಯುವಕರು ಮತ್ತು ವಿದ್ಯಾರ್ಥಿಗಳು ಇಂತಹ ಭಾವೈಕ್ಯತಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಬಹಳ ಅಗತ್ಯ. ಧರ್ಮದ ಹೆಸರಿನಲ್ಲಿ ದ್ವೇಷ ಬೀಜ ಬಿತ್ತುವ ಪ್ರಯತ್ನಗಳಿಗೆ ನಾವು ಒಗ್ಗಟ್ಟಿನಿಂದ ಉತ್ತರ ನೀಡಬೇಕು. ಮಜ್ಜಿದ್ ಎ ಅಕ್ಸಾ ಉದ್ಘಾಟನೆ ಶಾಂತಿ, ಸಹಬಾಳ್ವೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಪ್ರತೀಕವಾಗಿದೆ” ಎಂದು ಹೇಳಿದರು.
ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಸಮಿಉಲ್ಲಾ ಮಾತನಾಡಿ, ಮಸೀದಿ ಕೇವಲ ನಮಾಜಿನ ಸ್ಥಳವಲ್ಲ; ಅದು ಸಮಾಜ ಸೇವೆ, ಸಹಾನುಭೂತಿ ಮತ್ತು ಸೌಹಾರ್ದತೆಯ ಕೇಂದ್ರವಾಗಬೇಕು. ಎಲ್ಲ ಧರ್ಮದ ಸಹೋದರರು ಮಸೀದಿ ದರ್ಶನ ಮಾಡಿರುವುದು ಪರಸ್ಪರ ನಂಬಿಕೆಯನ್ನು ಬಲಪಡಿಸಿದೆ. ಇಂತಹ ಭಾವೈಕ್ಯತೆ ನಮ್ಮ ಅರಸೀಕೆರೆಯ ಹೆಮ್ಮೆ ಎಂದು ಹೇಳಿದರು.
ಗ್ರಾಮದ ಹಿರಿಯ ಕರೀಂ ಸಾಬ್ ಮಾತನಾಡಿ,
“ಮಜ್ಜಿದ್ ಎ ಅಕ್ಸಾ ಉದ್ಘಾಟನೆಯಲ್ಲಿ ವಿವಿಧ ಧರ್ಮದ ಮುಖಂಡರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಸಮಾಜ ಸೇವಕರು ಭಾಗವಹಿಸಿರುವುದು ನಮಗೆ ಗೌರವದ ವಿಷಯ. ಮಸೀದಿ ಸದಾ ಶಾಂತಿ, ಪ್ರೀತಿ ಮತ್ತು ಮಾನವೀಯ ಸಂದೇಶವನ್ನು ಸಾರಲಿದೆ. ಎಲ್ಲರ ಸಹಕಾರದಿಂದ ಈ ಭಾವೈಕ್ಯತೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಮೊಹಮ್ಮದ್ ಅತಾವುಲ್ಲಾ ಕಾರ್ಯದರ್ಶಿ ಮುಬಾರಕ್ ಪಾಶ, ಜಂಟಿ ಕಾರ್ಯದರ್ಶಿ ನವಾಸ್, ಮತ್ತು ಪದಾಧಿಕಾರಿಗಳು, ತಾ ಪಂ ಮಾಜಿ ಅಧ್ಯಕ್ಷ ಶಿವಮೂರ್ತಿ, ತಾ ಪಂ ಮಾಜಿ ಸದಸ್ಯ ಧರ್ಮ ಶೇಕರ್, ಮಾಜಿ ಜಿ ಪಂ ಸದಸ್ಯ ಬಿಳಿ ಚೌಡಯ್ಯ, ಪತ್ರಕರ್ತ ಮಲ್ನಾಡ್ ಮೆಹಬೂಬ್, ಶುಂಟಿ ಉದ್ಯಮಿ ಮುನ್ನಾ ಪಿಜಿಡಿ , ಕಾಂಗ್ರೆಸ್ ಹಿರಿಯ ಮುಖಂಡರಾದ ಅಬ್ದುಲ್ ಹಾದಿ, ಖಡಕಡಿ ಪೀರ್ ಸಾಬ್, ಅಬ್ದುಲ್ ಸಮದ್, ಜಮಾಲುದ್ದೀನ್, ಮುಂತಾದವರು ಇದ್ದರು.
The inauguration of Masjid-e-Aqsa in Haranahalli village of Arsikere taluk was inaugurated by Shivananda Shivacharya Swamiji of Kodimath Sri Kshetra.










