ತುಮಕೂರು: ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದಡಿ ಅಮಾನತುಗೊಂಡಿರುವ ಎಸ್ಪಿ ಪವನ್ ನೆಜ್ಜೂರ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.
ತುಮಕೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ಪಿ ಪವನ್ ನೆಜ್ಜೂರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಎಸ್ಪಿ ಪವನ್ ನೆಜ್ಜೂರ್ ಆರೋಗ್ಯವಾಗಿದ್ದಾರೆ.
ಎಸ್ಪಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಈ ಮಾಹಿತಿ ನಿಮಗೆ ಯಾರು ನೀಡಿದರು? ನಾನು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಪವನ್ ನೆಜ್ಜೂರ್ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ನನಗೆ ಮಾಹಿತಿ ನೀಡಲಾಗಿದೆ. ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ” ಎಂದು ತಿಳಿಸಿದರು.
ಅಮಾನತು ಹಿನ್ನೆಲೆ ಬೇಸರ ಇರಬಹುದು
ಅಧಿಕಾರಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವರು ಅಮಾನತುಗೊಂಡಿರುವ ಕಾರಣ ಸ್ವಲ್ಪ ಮಾನಸಿಕ ಒತ್ತಡ ಅಥವಾ ಬೇಸರ ಅನುಭವಿಸಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಅವರು ಮಾತ್ರೆ ಸೇವಿಸಿದ್ದಾರೆ ಎಂಬ ಮಾಹಿತಿ ನನಗೆ ಇಲ್ಲ. ಈ ಬಗ್ಗೆ ನಾನು ಪರಿಶೀಲಿಸುತ್ತೇನೆ. ಅವರು ಸಾಮಾನ್ಯ ಸ್ಥಿತಿಯಲ್ಲಿದ್ದು, ಬೆಂಗಳೂರಿಗೆ ತೆರಳುವುದಾಗಿ ತಮ್ಮ ಸ್ನೇಹಿತರಿಗೆ ತಿಳಿಸಿದ್ದಾರೆ” ಎಂದು ಸ್ಪಷ್ಟಪಡಿಸಿದರು.










