ಹಾಸನ: ಒತ್ತುವರಿ ಪ್ರಶ್ನಿಸಿದ್ದಕ್ಕೆ ಭಯಾನಕ ದಾಳಿ ನಡೆಸಿದ ಪಿಡಿಒ ಮತ್ತು ಸಹೋದರ!

It is alleged that Banavar PDO Kumaraswamy and his brother, Gram Panchayat member Nagendra, suddenly attacked the complainant Girish's family with maces, sticks and stones.

ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಸಮೀಪದಲ್ಲಿ ಈ ಭಯಾನಕ ಘಟನೆ ನಡೆದಿದೆ. ಬಾಣಾವರ ಪಿಡಿಓ ಕುಮಾರಸ್ವಾಮಿ ಹಾಗೂ ಆತನ ತಮ್ಮ, ಗ್ರಾಮಪಂಚಾಯತ್ ಸದಸ್ಯ ನಾಗೇಂದ್ರ‌ ಎಂಬವರು ದೂರುದಾರ ಗಿರೀಶ್ ಕುಟುಂಬದ ಮೇಲೆ ಏಕಾಏಕಿ ಮಚ್ಚು, ದೊಣ್ಣೆ ಮತ್ತು ಕಲ್ಲುಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ದಾಳಿಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಗಿರೀಶ್, ಮೂರ್ತಿ, ಪಾಪಣ್ಣ ಹಾಗೂ ರೇವಣ್ಣ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸರ್ಕಾರಿ ಜಾಗ–ಕೆರೆ ಒತ್ತುವರಿ ಆರೋಪ
ಪಿಡಿಓ ಕುಮಾರಸ್ವಾಮಿ ಹಾಗೂ ಆತನ ತಮ್ಮ ನಾಗೇಂದ್ರ ವಿರುದ್ಧ ಸರ್ಕಾರಿ ಜಾಗ ಮತ್ತು ಕೆರೆ ಒತ್ತುವರಿ ಆರೋಪ ಗಂಭೀರವಾಗಿ ಕೇಳಿಬಂದಿದೆ.

ನೀಲಗಿರಿ ಕಾವಲ್ ಗ್ರಾಮದ ಸರ್ವೇ ನಂಬರ್ 682ರಲ್ಲಿ ಇರುವ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೆ, 3.20 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಸುಮಾರು 2 ಎಕರೆ ಜಾಗವನ್ನು ಅಕ್ರಮವಾಗಿ ಕಬಳಿಸಿರುವ ಆರೋಪವಿದೆ.

ಇದಲ್ಲದೆ, ಪಿಡಿಓ ತನ್ನ ಪ್ರಭಾವ ಬಳಸಿ ಸರ್ಕಾರಿ ಜಾಗದಲ್ಲೇ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾನೆ ಎಂಬುದೂ ಆರೋಪವಾಗಿದೆ.

ಈ ಅಕ್ರಮಗಳಿಂದ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ನೀರಿನ ತೀವ್ರ ತೊಂದರೆ ಉಂಟಾಗಿದೆ ಎಂದು ದೂರುದಾರ ಗಿರೀಶ್ ತಹಸೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದರು. ಇದೇ ವಿಚಾರಕ್ಕೆ ಕೋಪಗೊಂಡು ದೂರುದಾರನ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ವಜಾಗೊಳಿಸುವಂತೆ ಒತ್ತಾಯ

ಸರ್ಕಾರಿ ಜಾಗವನ್ನು ರಕ್ಷಿಸಬೇಕಾದ ಅಧಿಕಾರಿಯೇ ಜಾಗ ಮತ್ತು ಕೆರೆಯನ್ನು ಕಬಳಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಗಂಭೀರ ಅಕ್ರಮ ಮತ್ತು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಪಿಡಿಓ ಕುಮಾರಸ್ವಾಮಿ ಅವರನ್ನು ತಕ್ಷಣ ಸರ್ಕಾರಿ ಸೇವೆಯಿಂದ ವಜಾಗೊಳಿಸಬೇಕು ಎಂದು ಗ್ರಾಮಸ್ಥರು ಹಾಗೂ ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿದೆ.

It is alleged that Banavar PDO Kumaraswamy and his brother, Gram Panchayat member Nagendra, suddenly attacked the complainant Girish’s family with maces, sticks and stones.