ಹಾಸನ: ಕೆಎಂಎಫ್ ವತಿಯಿಂದ ರೈತರಿಂದಲೇ ನೇರವಾಗಿ ಮೆಕ್ಕೆಜೋಳಖ ರೀದಿ ಮಾಡುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ರಾಜ್ಯ ಸರ್ಕಾವರನ್ನು ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಅತಿ ಹೆಚ್ಚು ಮಳೆಯಿಂದ ಶೇ.50 ರಷ್ಟು ಮೆಕ್ಕೆ ಜೋಳ ನಷ್ಟವಾಗಿದ್ದು, ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತ ಪರ ನಿಲ್ಲಬೇಕಾದುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ, ಆದರೆ ಈ ಸರ್ಕಾರ ಖಾಸಗಿಯವರಿಗೆ ಅನುಕೂಲವಾಗಿವ ರೀತಿ ನಡೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಎಂಎಫ್ ವತಿಯಿಂದ ಖಾಸಗಿಯವರ ಬಳಿ ಈಗಾಗಲೇ 29 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡಿದ್ದಾರೆ. ಆದರೆ ರೈತರ ಬಳಿ ಕೇವಲ 10 ಸಾವಿರ ಮೆಟ್ರಿಕ್ ಟನ್ ಖರೀದಿ ಮಾಡಲು ಮುಂದಾಗಿದ್ದಾರೆ. ಈ ತಾರತಮ್ಯ ನಿಲ್ಲಬೇಕು ಎಂದು ಒತಾಯಿಸಿದರು.
ನಾನು ಕೆಎಂಎಫ್ ಅಧ್ಯಕ್ಷನಾಗಿದ್ದಾಗ ಖಾಸಗಿಯವರನ್ನು ಹತ್ತಿರ ಕೂಡ ಸುಳಿಯಲು ಬಿಟ್ಟಿರಲಿಲ್ಲ. ಖಾಸಗಿ ಪಶು ಆಹಾರ ಘಟಕಗಳನ್ನು ಮುಚ್ಚಿಸಿದ್ದೆ ಎಂದ ಅವರು, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಹಕಾರಿ ಸಚಿವರಾಗಿರುವುದರಿಂದ ಒಂದು ಕ್ವಿಂಟಾಲ್ಗೆ 2400 ರಂತೆ ರೈತರಿಂದಲೇ ಮೆಕ್ಕೆ ಜೋಳ ಖರೀದಿ ಮಾಡಬೇಕು ಜೊತೆಗೆ ಪಶು ಆಹಾರಕ್ಕೆ ಅಗತ್ಯವಿರುವ ವಸ್ತುಗಳನ್ನು ನೇರವಾಗಿ ರೈತರಿಂದಲೇ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹಿಂದೆ ಸುಮಾರು 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆಯುತ್ತಿದ್ದರು. ನಾನು ಕೂಡ 40 ಎಕರೆಯಲ್ಲಿ ಆಲೂಗೆಡ್ಡೆ ಬೆಳೆಯುತ್ತಿದ್ದೆ, ಇಂದು ಮಳೆ ಹೆಚ್ಚಳ ಆಗಿ, ತೇವಾಂಶ ಹೆಚ್ಚಾಗಿ ಅಂಗಮಾರಿ ರೋಗ ಬಂದ ಕಾರಣಕ್ಕೆ ಇಂದು ಕೇವಲ ಏಳೆಂಟು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಇಳಿದಿದೆ.
ಈ ಬಾರಿ ಜಿಲ್ಲೆಯಲ್ಲಿ 2.20 ಲಕ್ಷ ಹೆಕ್ಟೇರ್ ನಲ್ಲಿ ಮೆಕ್ಕೆ ಜೋಳ ಬೆಳೆದಿದ್ದಾರೆ. ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಡಿಸಿ ಅವರು ದಿನನಿತ್ಯ ಕೇವಲ ಮೀಟಿಂಗ್ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ. ಯಾವ ಅಧಿಕಾರಿಗಳನ್ನು ಕೇಳಿದರು ಡಿಸಿ ಮೀಟಿಂಗ್ ನಲ್ಲಿದ್ದೇನೆ ಎಂದು ಹೇಳುತ್ತಾರೆ. ಆದರೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಯಗಚಿ – ಕಾಮಸಮುದ್ರ ನಾಲೆ ಕೆಲಸ ಪೂರ್ಣಗೊಳ್ಳದ ಕಾರಣ 8 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಆಗುತ್ತಿಲ್ಲ. ಮುಖ್ಯಮಂತ್ರಿಗಳು ದಯಮಾಡಿ ಈ ಕಡೆ ಕಣ್ಣು ಬಿಡಿ, ಎತ್ತಿನಹೊಳೆ, ಮೇಕೆದಾಟು ಆಮೇಲೆ ಮಾಡಿಕೊಳ್ಳಿ. ಭೂ ಸ್ವಾಧೀನ ಪ್ರಕ್ರಿಯೆ ಅಪೂರ್ಣಗೊಂಡಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಭೂ ಸ್ವಾಧೀನಕ್ಕೆ ಅಗತ್ಯವಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮತ್ತೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು ಭಾನುವಾರ ಕೂಡ ಇಬ್ಬರೂ ಹೃದಯಾಘಾತಕ್ಕೆ ಇಬ್ಬರು ಸಾವನಪ್ಪಿದ್ದಾರೆ. ಕೂಡಲೇ ಹಿಮ್ಸ್ ನಲ್ಲಿ ಕಾರ್ಡಿಯಾಲಜಿ ಘಟಕ ತೆರೆಯುವಂತೆ ಒತ್ತಾಯಿಸಿದರು.
Former Minister H.D. Revanna urged the state government to procure maize directly from the farmers through KMF










