ಬೆಂಗಳೂರು: ತನ್ನಿಂದ ದೂರಾಗಿರುವ ಪತ್ನಿಯ ಬಳಿಯಿದ್ದ ಪ್ರೀತಿಯ ಮಗಳನ್ನು ತನ್ನ ವಶಕ್ಕೆ ಪಡೆಯಲು ಹೆಂಡತಿಯನ್ನು ಅಪಹರಿಸಿದ ಸಂಬಂಧ ಹಾಸನ ಮೂಲದ ಚಲನಚಿತ್ರ ನಿರ್ಮಾಪಕ ಹರ್ಷವರ್ಧನ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವರ್ಧನ್ ಸಿನಿಮಾಸ್ ಸಂಸ್ಥೆಯ ನಿರ್ಮಾಪಕ ಹಾಗೂ ನಿರ್ದೇಶಕ ಹರ್ಷವರ್ಧನ್, ತನ್ನ ಪತ್ನಿ ಹಾಗೂ ಸೀರಿಯಲ್ ನಟಿ ಚೈತ್ರಾ ಅವರನ್ನು ಕಿಡ್ನ್ಯಾಪ್ ಮಾಡಿರುವುದಾಗಿ ಆರೋಪಿಸಿ ಆತನ ಅತ್ತೆ ದೂರು ನೀಡಿದ್ದಾರೆ.
ಚೈತ್ರಾ ಅವರು ಕೆಲ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಹರ್ಷವರ್ಧನ್ ಅವರೊಂದಿಗೆ ಸೇರಿ ‘ನಿನ್ನಲೇನೋ ಹೇಳಬೇಕು’ ಎಂಬ ಸಿನಿಮಾ ನಿರ್ಮಿಸಿದ್ದರು. ಇಬ್ಬರೂ 2023ರಲ್ಲಿ ಪರಸ್ಪರ ಒಪ್ಪಿಗೆಯಿಂದ ವಿವಾಹವಾಗಿದ್ದು, ದಂಪತಿಗೆ ಇದೀಗ ಒಂದು ವರ್ಷದ ಮಗಳಿದ್ದಾಳೆ.
ಆದರೆ, ಮದುವೆಯ ನಂತರ ದಂಪತಿಯ ನಡುವೆ ಮನಸ್ತಾಪ ಉಂಟಾಗಿ, ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ಜಗಳದ ಬಳಿಕ ಮಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ನಟಿ ಚೈತ್ರಾ, ಹರ್ಷವರ್ಧನ್‌ಗೆ ಮಗಳನ್ನು ಭೇಟಿಯಾಗಲು ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ.
ಇದರಿಂದ ಮನಸ್ತಾಪ ಗಂಭೀರವಾಗಿದ್ದು, ಮಗಳನ್ನು ತನ್ನ ಬಳಿಗೆ ಕರೆಸಿಕೊಳ್ಳುವ ಉದ್ದೇಶದಿಂದ ಹರ್ಷವರ್ಧನ್ ಪತ್ನಿಯನ್ನೇ ಅಪಹರಿಸಿದ್ದಾನೆ ಎಂದು ದೂರಲಾಗಿದೆ.
ಚೈತ್ರಾ ಅವರ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಿರುವ ಹರ್ಷವರ್ಧನ್, “ನಿನ್ನ ಮಗಳು ಬೇಕಾದರೆ ನನ್ನ ಮಗಳನ್ನು ಕೊಡು” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಕುರಿತು ದೂರು ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
complaint has been filed at the Byatarayanapura police station against Hassan-based film producer Harshavardhan for allegedly kidnapping his estranged wife to take custody of her beloved daughter.










