ಹಾಸನ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಬ್ರೈನ್ ಡೆಡ್ ಆಗಿದ್ದ ಪುತ್ರನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಚನ್ನರಾಯಪಟ್ಟಣ ತಾಲ್ಲೂಕಿನ ಸಾಗತವಳ್ಳಿ ಗ್ರಾಮದ ಪೋಷಕರು ಅಪಾರ ಮಾನವೀಯತೆ ಮೆರೆದಿದ್ದಾರೆ.
ಸಾಗತವಳ್ಳಿ ಗ್ರಾಮದ ನಂಜಮ್ಮ ಹಾಗೂ ನಂಜುಂಡೇಗೌಡ ದಂಪತಿಯ ಪುತ್ರ ಯೋಗೇಶ್ (35) ಕಳೆದ ಆರು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಮೊದಲಿಗೆ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಯೋಗೇಶ್ ಅವರನ್ನು ನಂತರ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್) ಹಾಗೂ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆ ಪುನಃ ಹಿಮ್ಸ್‌ಗೆ ದಾಖಲಿಸಲಾಗಿತ್ತು.
ವೈದ್ಯಕೀಯ ಪರೀಕ್ಷೆಗಳ ನಂತರ ಯೋಗೇಶ್ ಬ್ರೈನ್ ಡೆಡ್ ಆಗಿರುವುದು ದೃಢಪಟ್ಟಿತು. ಈ ದುಃಖದ ಕ್ಷಣದಲ್ಲೂ ಪೋಷಕರು ಮಹತ್ವದ ನಿರ್ಧಾರ ತೆಗೆದುಕೊಂಡು ಮಗನ ಲಿವರ್ ಹಾಗೂ ಹೃದಯದ ವಾಲ್ವ್‌ಗಳನ್ನು ದಾನ ಮಾಡಲು ಒಪ್ಪಿದರು. ಅಂಗಾಂಗಗಳನ್ನು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಅಂಬ್ಯುಲೆನ್ಸ್ ಮೂಲಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.
ಪೋಷಕರ ಈ ಉದಾತ್ತ ನಿರ್ಧಾರದಿಂದ ಅನೇಕ ರೋಗಿಗಳಿಗೆ ಜೀವದ ಆಶೆ ಮೂಡಿದ್ದು, ಸಮಾಜಕ್ಕೆ ಮಾನವೀಯತೆಯ ಮಹತ್ತರ ಸಂದೇಶವನ್ನು ನೀಡಿದ್ದಾರೆ ಎಂದು ವೈದ್ಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
The parents of Sagathavalli village in Channarayapatna taluk have shown immense humanity by donating the organs of their son, who was severely injured in an accident and became brain dead.










