ಸಕಲೇಶಪುರ: ಗುತ್ತಿಗೆದಾರ ವೃತ್ತಿ ಮೊದಲಿನಷ್ಟು ಸರಳವಾಗಿಲ್ಲ ಎಂದ ಬಾಚಿಹಳ್ಳಿ ಪ್ರತಾಪ್ ಗೌಡ

Social worker and contractor Bachihalli Pratap Gowda said that it is difficult to succeed as a contractor these days and the government should relax some of the rules.

ಸಕಲೇಶಪುರ: ಪ್ರಸ್ತುತ ದಿನಗಳಲ್ಲಿ ಗುತ್ತಿಗೆದಾರರಾಗಿ ಯಶಸ್ಸು ಸಾಧಿಸುವುದು ಕಷ್ಟಕರವಾಗಿದ್ದು ಸರ್ಕಾರ ಕೆಲವು ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಸಮಾಜ ಸೇವಕ ಹಾಗೂ ಗುತ್ತಿಗೆದಾರ ಬಾಚಿಹಳ್ಳಿ ಪ್ರತಾಪ್ ಗೌಡ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ತಾಲೂಕು ಗುತ್ತಿಗೆದಾರರ ಸಂಘದಿಂದ 2026ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ಗುತ್ತಿಗೆದಾರರ ಕೆಲಸ ಈ ಹಿಂದಿನಷ್ಟು ಸುಲಭ ಇಲ್ಲ. ಯಾವುದೇ ಸರ್ಕಾರ ಇರಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಕಾಮಗಾರಿ ಮಾಡಲು ಕಮಿಷನ್ ನೀಡಬೇಕಾಗುತ್ತದೆ ಎಂದರು.

ಗುತ್ತಿಗೆದಾರರು ತಮ್ಮ ರಂಗದಲ್ಲಿ ಯಶಸ್ವಿಯಾಗಲು ಎಲ್ಲ ಕೆಲಸವನ್ನು ಮಾಡಲು ಸಿದ್ಧರಿರಬೇಕು. ಅಂದರೆ ತಾವೇ ಸ್ವತಃ ಕಾಮಗಾರಿಯ ಎಸ್ಟಿಮೇಟ್, ಡ್ರಾಯಿಂಗ್, ಮಾರ್ಕಿಂಗ್ ಮಾಡುವುದು ಸೇರಿದಂತೆ ಎಲ್ಲಾ ಕೆಲಸದ ಬಗ್ಗೆ ಅರಿವಿದ್ದಲ್ಲಿ ಯಶಸ್ವಿ ಗುತ್ತಿಗೆದಾರರಾಗಲು ಸಾಧ್ಯ.

ಇಂದಿನ ಗುತ್ತಿಗೆ ವ್ಯವಸ್ಥೆಯಲ್ಲಿ ಸರಿಯಾದ ಸಮಯಕ್ಕೆ ಬಿಲ್ ಗಳು ಪಾವತಿಯಾಗದ ಕಾರಣ ಹಲವಾರು ಗುತ್ತಿಗೆದಾರರು ಶುಗರ್, ಬಿಪಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ ಕೆಲವು ಗುತ್ತಿಗೆದಾರರು ಒತ್ತಡವನ್ನು ಎದುರಿಸಲಾಗದೆ ಗುತ್ತಿಗೆ ಕೆಲಸವೇ ಬೇಡ ಎಂದು ಈ ರಂಗದಿಂದಲೇ ವಿಮುಖರಾಗುತ್ತಿದ್ದಾರೆ. ಗುತ್ತಿಗೆದಾರರಲ್ಲಿ ಸಂಘಟನೆ ಅಗತ್ಯವಾಗಿದ್ದು ಸಂಘಟನೆ ಇಲ್ಲದಿದ್ದಲ್ಲಿ ಈ ರಂಗದಲ್ಲಿ ಉಳಿಯಲು ಅಸಾಧ್ಯ ಎಂದರು.

ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಮಾತನಾಡಿ, ಇಂದು ಗುತ್ತಿಗೆ ಕೆಲಸ ಮಾಡುವುದು ಬಹಳ ಕಷ್ಟಕರವಾಗಿದೆ. ಕೆಲವೊಂದು ಟೆಂಡರ್ ಗಳಿಗೆ ನಾವೆಲ್ಲ ಒಟ್ಟಾಗಿ ಟೆಂಡರ್ ಹಾಕಿದರೆ ಹೊರ ಊರಿನ ಗುತ್ತಿಗೆದಾರರು ತಮಗೆ ಬೇಕಾದಂತೆ ದರ ಕೋಟ್ ಮಾಡುವುದರಿಂದ ಸ್ಥಳೀಯರಿಗೆ ಯಾವುದೇ ಕೆಲಸಗಳು ದೊರಕುತ್ತಿಲ್ಲ.ಹೀಗಾಗಿ ಸ್ಥಳೀಯ ಗುತ್ತಿಗೆದಾರರು ಕೆಲಸ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗುತ್ತಿಗೆದಾರರ ಸಂಘದ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ನೂತನ ಭವನ ನಿರ್ಮಾಣಕ್ಕೆ ಪ್ರತಾಪ್ ಗೌಡರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಪ್ರತಾಪ್ ಗೌಡ ಗುತ್ತಿಗೆದಾರರ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ತಾಲೂಕು ಗುತ್ತಿಗೆದಾರರ ಸಂಘದ ಸದಸ್ಯ ಕರಗೂರು ರಮೇಶ್ ಸ್ವಾಗತ ಮಾಡಿದರು. ಸಂಘದ ಕಾರ್ಯದರ್ಶಿ ಪ್ರೇಮ್ ನಾಥ್ ವಂದನಾರ್ಪಣೆ ಮಾಡಿದರು. ಸಂಘದ ನಿರ್ದೇಶಕ ಹೊಸೂರು ರವಿಚಂದ್ರ, ಹಿರಿಯ ಗುತ್ತಿಗೆದಾರ ಗುರಪ್ಪ ಗೌಡ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಅವಿನಾಶ್,ಸಂಘದ ಉಪಾಧ್ಯಕ್ಷ ಬಿಕೆ ಮಹೇಶ್, ಸಹ ಕಾರ್ಯದರ್ಶಿ ರಾಜೇಶ್, ಖಚಂಚಿ ವಿವೇಕಾನಂದ, ಸಂಘದ ಹಿರಿಯ ಸದಸ್ಯರುಗಳಾದ ಸುರೇಶ್, ರಾಮಚಂದ್ರು, ದಯಾನಂದ್, ಕೌಕೌಡಿ ದಿನೇಶ್, ಪುಟ್ಟಸ್ವಾಮಿ, ಪ್ರದೀಪ್ ಚಿನ್ನಹಳ್ಳಿ,ಬೆಳ್ಳಿಯಪ್ಪ, ನಾಗೇಶ್, ಮೊಗಣ್ಣ ಗೌಡ ಮುಂತಾದವರು ಹಾಜರಿದ್ದರು.

Social worker and contractor Bachihalli Pratap Gowda said that it is difficult to succeed as a contractor these days and the government should relax some of the rules.