10.4 C
Munich
Home News ಸಕಲೇಶಪುರ: ಬದುಕಿರುವ ವೃದ್ಧೆಯ ಡೆತ್ ಸರ್ಟಿಫಿಕೆಟ್ ಪಡೆದು ಅಜ್ಜಿ ಆಸ್ತಿ ಲಪಟಾಯಿಸಿದ ಆಸಾಮಿ!

ಸಕಲೇಶಪುರ: ಬದುಕಿರುವ ವೃದ್ಧೆಯ ಡೆತ್ ಸರ್ಟಿಫಿಕೆಟ್ ಪಡೆದು ಅಜ್ಜಿ ಆಸ್ತಿ ಲಪಟಾಯಿಸಿದ ಆಸಾಮಿ!

ಸಕಲೇಶಪುರ: ವಯೋವೃದ್ಧೆ ಬದುಕಿರುವಾಗಲೇ ಅವರು ಸತ್ತಿದ್ದಾರೆ ಎಂದು ಅವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಮಾಡಿಸಿ ಆಸ್ತಿ ಲಪಟಾಯಿಸಿದ ಆರೋಪ ಕೇಳಿ ಬಂದಿದೆ.

ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಏನೂ ತಿಳಿಯದ ಅಜ್ಜಿ ಸಿದ್ದಮ್ಮ, ಮುಂದೇನು ಎಂದು ಕಣ್ ಕಣ್ ಬಿಡುತ್ತಿದ್ದಾರೆ. ಸಿದ್ದಮ್ಮ ಅವರ ಹೆಸರಿನಲ್ಲಿ ಸರ್ವೆ ನಂ.68 ರಲ್ಲಿ 1 ಎಕರೆ 20 ಗುಂಟೆ ಭೂಮಿ ಇದೆ. ಇದೇ ವೃದ್ಧೆಗೆ ಜೀವನಾಧಾರವಾಗಿದೆ.

ಆದರೆ ಸದರಿ ಭೂಮಿಯನ್ನು ಇದೇ ತಾಲೂಕಿನ ಬಾಳ್ಳುಪೇಟೆ ಗ್ರಾಮದ ಶೇಖ್ ಅಹಮದ್ ಎಂಬಾತ ತಾನು ಸಿದ್ದಮ್ಮ ಅವರ ದತ್ತು ಪುತ್ರ ಎಂದು ನಕಲಿ ವಂಶ ವೃಕ್ಷ ಮಾಡಿಸಿ, 2008 ರಲ್ಲೇ ಸಿದ್ದಮ್ಮ ವಿಲ್ ಮಾಡಿದಂತೆ ಸುಳ್ಳು ದಾಖಲೆ ಸೃಷ್ಟಿ ಮಾಡಿ ವಂಚಿಸಿದ್ದಾನೆ ಎಂದು ದೂರಿದ್ದಾರೆ.

ಬಳಿಕ 2009, ಅ.4 ರಂದು ಅಜ್ಜಿ ಮರಣ ಹೊಂದಿದಂತೆ ಮರಣ ಪ್ರಮಾಣ ಪತ್ರ ಮಾಡಿಸಿ ಭೂಮಿಯನ್ನು ತನ್ನಂತೆ ಮಾಡಿಕೊಂಡು ಮೋಸ ಮಾಡಿದ್ದಾನೆ ಎಂದು ಅಜ್ಜಿ ಮತ್ತು ಮಗ ಚಿಂತಾಕ್ರಾಂತರಾಗಿದ್ದಾರೆ. ಶೇಖ್ ಅಹಮದ್ ವಿರುದ್ಧ ಸಿದ್ದಮ್ಮ ಹಾಗೂ ಅವರ ನೈಜ ಪುತ್ರ ನಿಂಗರಾಜು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶೇಖ್ ಅಹಮದ್ ನಕಲಿ ದಾಖಲೆ ಸೃಷ್ಟಿಸಲು ಹಣದ ಆಸೆಗೆ ಸಹಾಯ ಮಾಡಿರುವ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಉಪ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

error: Content is protected !!