ಹಾಸನ: ಪಿಡಿಒಗೆ ದನಕಾಯಲು ಲಾಯಕ್ ಎಂದ ಶಾಸಕ ಶಿವಲಿಂಗೇಗೌಡ ಹೇಳಿಕೆ‌ ಖಂಡಿಸಿದ ಪಿಡಿಓಗಳ ಸಂಘ- ಕ್ಷಮೆಗೆ ಆಗ್ರಹಿಗೆ ಸಿಎಂಗೆ ಪತ್ರ

All the Panchayat Development Officers of the state are performing their duties with efficiency and honesty. They have made a public statement saying, “PDOs should go and herd cattle, you are worthy of it.”

ಹಾಸನ :ಮಹಿಳಾ ಪಿಡಿಓ ಒಬ್ಬರನ್ನು ದನ ಕಾಯಲು ಲಾಯಕ್ ಎಂದು ಹೇಳಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಆಕ್ರೋಶದ ನುಡಿ ವಿವಾದಕ್ಕೆ ಕಾರಣವಾಗಿದ್ದು, ಅವರ ಹೇಳಿಕೆ ಖಂಡಿಸಿರುವ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಶಾಸಕರು ಕ್ಷಮೆ ಯಾಚಿಸುವಂತೆ ಆಗ್ರಹಿಸಿದೆ.

ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ. “ಪಿಡಿಓಗಳು ದನ ಕಾಯಲು ಹೋಗಬೇಕು, ನೀವು ಅದಕ್ಕೆ ಲಾಯಕ್” ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಸಂಪೂರ್ಣ ಬಳಗಕ್ಕೆ ನೋವುಂಟು ಮಾಡಿದೆ ಎಂದು ಸಂಘದ ಅಧ್ಯಕ್ಷರು ಬರೆದಿರುವ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಿಎಂಎವೈ ಯೋಜನೆಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು ಕುರಿತು ಪಿಡಿಓ ವೇದಾವತಿ ಸರಿಯಾದ ಮಾಹಿತಿಯನ್ನು ನೀಡಿದರೂ, ಶಾಸಕರು ಅದನ್ನು ಕೇಳಿಸಿಕೊಳ್ಳದೆ ಸಾರ್ವಜನಿಕವಾಗಿ ನಿಂದಿಸಿರುವುದು ಅತ್ಯಂತ ದುಃಖದ ಸಂಗತಿ ಎಂದು ಸಂಘ ಬೇಸರ ವ್ಯಕ್ತಪಡಿಸಿದೆ.

“ಸಂಸದೀಯ ವ್ಯವಸ್ಥೆ, ಆಡಳಿತ ಮತ್ತು ಅಧಿಕಾರಗಳ ಕುರಿತು ಜ್ಞಾನ ಹೊಂದಿರುವವರು ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅಧಿಕಾರಿಗಳನ್ನು ಸಾರ್ವಜನಿಕವಾಗಿ ಅವಹೇಳನ ಮಾಡುವುದು ಸೂಕ್ತವಲ್ಲ,” ಎಂದು ಸಂಘದ ರಾಜ್ಯಾಧ್ಯಕ್ಷ ರಾಜಶೇಖರ ವಾರದ ಅವರು ಪತ್ರದಲ್ಲಿ ಹೇಳಿದ್ದಾರೆ.

ಸಂಘವು ಶಾಸಕರು ತಮ್ಮ ಹೇಳಿಕೆಗೆ ಬಹಿರಂಗ ಕ್ಷಮೆ ಕೋರಿ, ಅಧಿಕಾರಿಗಳ ಗೌರವವನ್ನು ಕಾಪಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದೆ.