ಹಾಸನ: ಜಿಲ್ಲೆಯ ಕ್ರೀಡಾ ವಲಯಕ್ಕೆ ಹೊಸ ಚೈತನ್ಯ ತುಂಬುವ ನೂತನ ಶೂಟಿಂಗ್ ರೇಂಜ್‌ನ್ನು 15ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಶಾಖೆ ಮೂಲಕ ಭವ್ಯವಾಗಿ ಉದ್ಘಾಟಿಸಲಾಯಿತು
ಮೈಸೂರಿನ ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ರೋಹಿತ್ ಠಾಕೂರ್ ಹಾಗೂ ಎನ್‌ಸಿಸಿ ಬೆಟಾಲಿಯನ್ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹಿತೇಶ್ ಕಾಲಾ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಕರ್ನಲ್ ರೋಹಿತ್ ಠಾಕೂರ್ ಅವರು, ಈ ಶೂಟಿಂಗ್ ರೇಂಜ್ ನಿರ್ಮಾಣ ನಮ್ಮ ಬಹುಕಾಲದ ಕನಸನ್ನು ಸಾಕಾರಪಡಿಸಿದೆ. ಭವಿಷ್ಯದಲ್ಲಿ ಅಂತಾರಾಷ್ಟ್ರಿಯ ಪದಕ ಗೆಲ್ಲುವ ಶೂಟರ್‌ಗಳನ್ನು ತಯಾರಿಸಲು ಇದು ಭದ್ರ ಬುನಾದಿ ಹಾಕುತ್ತದೆ ಎಂದು ಅಭಿಪ್ರಾಯಪಟ್ಟರು.
ನಾಗರಿಕ, ಸೈನಿಕ ಸಹಯೋಗದ ಮೂಲಕ ಈ ಯೋಜನೆ ಯಶಸ್ವಿಯಾಗಿ ಬೆಳಕಿಗೆ ಬಂದಿದೆ ಎಂದು ಅವರು ಶ್ಲಾಘಿಸಿದರು.
ರೇಂಜ್‌ನಲ್ಲಿ ಲಭ್ಯವಿರುವ ಮೂಲ ಸೌಕರ್ಯ ಬಳಸಿಕೊಂಡು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಆಸಕ್ತ ಶೂಟರ್‌ಗಳಿಗೆ ತಜ್ಞ ತರಬೇತುದಾರರ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗಲಿದೆ. ಯುವ ಪ್ರತಿಭೆಗಳು ರಾಷ್ಟ್ರಿಯ ಹಾಗೂ ಅಂತಾರಾಷ್ಟ್ರಿಯ ಮಟ್ಟದ ಸ್ಪರ್ಧೆಗೆ ಸಿದ್ಧರಾಗುವಂತೆ ಸಮಗ್ರ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಕಮಾಂಡಿಂಗ್ ಆಫೀಸರ್ ಮಂದಿಪ್, ಎ.ಒ ಶಂಕರ್, ಮೈಸೂರು ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ಅಧ್ಯಕ್ಷ ಡಾ. ಮಹೇಶ್ ಹಾಗೂ ಕಾರ್ಯದರ್ಶಿ ವಿವೇಕ್ ಹೆಚ್.ಎಸ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ಈ ರೇಂಜ್ ಸೇನಾ ಮತ್ತು ಕ್ರೀಡಾ ಸಮುದಾಯಗಳ ಜಂಟಿ ಪ್ರಯತ್ನಕ್ಕೆ ಅತಿಥಿಗಳು ಸಂತೋಷ ವ್ಯಕ್ತಪಡಿಸಿದರು.










