ಸಕಲೇಶಪುರ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುವಂತೆ ಶಾಸಕ ಸಿಮೆಂಟ್ ಮಂಜು, ಆಗ್ರಹಿಸಿದರು.
ಶುಕ್ರವಾರ ತಾಲೂಕಿನ ಹಾನುಬಾಳು ಕೆಪಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ಹಾನುಬಾಳು, ರಕ್ಷಿದಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಹುದುಗಿರುವ ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಿ, ಮುಖ್ಯವಾಹಿನಿಗೆ ತರಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಶಾಲಾ, ಕ್ಲಸ್ಟರ್, ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಸ್ಪರ್ಧೆಗಳನ್ನು ಆಯೋಜಿಸುತ್ತಿರುವ ಶಾಲೆಗಳಿಗೆ ಸರ್ಕಾರ ಹೆಚ್ಚು ಅನುದಾನ ನೀಡಬೇಕು ಈ ಕುರಿತಂತೆ ಸಂಬಂಧ ಪಟ್ಟ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಉತ್ತಮ ಸಂಸ್ಕಾರ ಮೂಡಿಸಬೇಕು ಅಂದಾಗ ಒಳ್ಳೆಯ ನಾಗರೀಕರಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಪ್ರತಿಭಾ ಕಾರಂಜಿ ಪ್ರತಿ ಮಗುವು ಸಹ ಸ್ವಯಂ ಪ್ರೇರಣೆಯಿಂದ ಭಾಗವಹಿಸುವಂತೆ ಮಾಡುತ್ತದೆ.
ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹ ನೀಡಬೇಕು. ಅವರಲ್ಲಿರುವ ಕೀಳರಿಮೆ ಹಾಗೂ ಸಂಕುಚಿತ ಮನೋಭಾವವನ್ನು ದೂರು ಮಾಡಬೇಕೆಂದು ಹೇಳಿದರು.
ಶೈಕ್ಷಣಿಕ ಪ್ರಗತಿಯಲ್ಲಿ ತಾಲೂಕು ಗಣನೀಯ ಸಾಧನೆ ಮಾಡಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮಯ ವಿಷಯವಾಗಿದೆ ಎಂದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಹರೀಶ್ ಮಾತನಾಡಿ, ಶಿಕ್ಷಣ ಪಡೆದ ವಿದ್ಯಾರ್ಥಿಯು ಸಮಾಜದಲ್ಲಿ ಸ್ವಚ್ಛಂದ ನಾಗರಿಕನಾಗಿದ್ದಾನೆಯೇ ಎಂದು ನಾವ್ಯಾರು ಗಮನಿಸುವುದಿಲ್ಲ. ಇಂದು ನಾವೆಲ್ಲರೂ ಸಂವಿಧಾನದ ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತೇವೆ ಕರ್ತವ್ಯಗಳ ಪಾಲನೆಗಳ ಚಿಂತಿಸದಿರುವುದು ವಿಷಾದ ಸಂಗತಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್, ಎಸ್.ಡಿ.ಎಂ.ಸಿ ಅಧ್ಯಕ್ಷ ಅರುಣ್ ಕುಮಾರ್, ಕ್ಷೇತ್ರ ಶಿಕ್ಷಣ ಸಂಯೋಜಕರಾದ ಗಂಗಾಧರ್, ಕೆಪಿಎಸ್ ಶಾಲೆಯ ಹಿರಿಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ಚಂದ್ರಶೇಖರ್, ದೇವಾಲದಕೆರೆ ಗ್ರಾ.ಪಂ ಉಪಾಧ್ಯಕ್ಷ ರವೀಂದ್ರ, ಇಂಡಿಯನ್ ಸ್ಕೂಲ್ ಎಸ್ ಡಿ ಎಂ.ಸಿ ಅಧ್ಯಕ್ಷ ರಾಜಕುಮಾರ್ ಮುಖಂಡರಾದ ಅಗ್ನಿ ಸೋಮಶೇಖರ್ ಸೇರಿದಂತೆ ಕ್ಲಸ್ಟರ್ ಮಟ್ಟದ ಶಾಲೆಗಳ ಎಸ್.ಡಿ. ಎಂ.ಸಿ ಅಧ್ಯಕ್ಷರುಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತಿರಿದ್ದರು










