ಚನ್ನರಾಯಪಟ್ಟಣ: ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಮಾದಲಗೆರೆ ಗ್ರಾಮದ ಭೋವಿ ಕಾಲೋನಿಯಲ್ಲಿ 25 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮಗಳು ಅಭಿವೃದ್ಧಿ ಹೊಂದಿದ್ದರೆ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡುವ ಬರದಲ್ಲಿ ರಾಜ್ಯ ಸರ್ಕಾರವು ಅಗತ್ಯ ಅನುದಾನ ನೀಡುತ್ತಿಲ್ಲ. ಲಭ್ಯವಾಗಿರುವ ಅನುದಾನದಲ್ಲಿಯೇ ಸಾಕಷ್ಟು ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ಅಂತಿಮ ವೇಳೆಯಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಕೆಲವಿಡೆ ಕಾಂಕ್ರೀಟ್ ಹಾಗೂ ಡಾಂಬರ್ ಕಿತ್ತು ಬಂದಿದ್ದು ರಸ್ತೆಗಳು ಹಾಳಾಗಿದೆ. ಸೇತುವೆಗಳು ದುಸ್ಥಿತಿಗೊಂಡಿವೆ. ದುರಸ್ತಿಗೂಳಿಸಲು ಹೆಚ್ಚಿನ ಅನುದಾನ ಅಗತ್ಯವಿದ್ದು ಸರ್ಕಾರದ ಗಮನ ಸೆಳೆದು ಅಗತ್ಯ ಅನುದಾನ ತಂದು ಅಭಿವೃದ್ಧಿ ಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಗ್ರಾಮದ ಮುಂಭಾಗದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪುಟ್ಟರಾಜು, ಎಂ.ಆರ್.ವಾಸು, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಮ್, ಅಕ್ಕನಹಳ್ಳಿ ಕೂಡು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಂ.ಎಂ.ದಿಲೀಪ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎಂ.ದಿನೇಶ್ ಮತ್ತು ಶ್ರುತಿ ಮಧು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತ್ಯಾಗರಾಜ್, ಜೆಡಿಎಸ್ ಮುಖಂಡ ತೋಟಿ ನಾಗರಾಜು, ಪ್ರಮುಖರಾದ ಮಂಜುನಾಥ್, ನವೀನ್, ವಿಕ್ಟರಿ, ಪುಟ್ಟಣ್ಣ, ಅಶೋಕ್, ಮೋಹನ್, ಹಾಗೂ ಇತರರು ಇದ್ದರು.










