ಹಾಸನ: ನಗರದ ಎಲೈಟ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆಯನ್ನು ಶಾಲೆಯ ಆಡಳಿತ ಮಂಡಳಿ ಖಜಾಂಚಿ ಸಪ್ನ ಕಿರಣ್ ಅವರು ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ಜೀವನದಲ್ಲಿ ಸೋಲು–ಗೆಲುವು ಮುಖ್ಯವಲ್ಲ ಎನ್ನುವುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಪ್ರತಿ ಸ್ಪರ್ಧೆ, ಪರೀಕ್ಷೆಗಳನ್ನು ಸ್ಪರ್ಧಾತ್ಮಕ ದೃಷ್ಟಿಕೋನದಲ್ಲಿ ನೋಡಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡರೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬಹುದು” ಎಂದು ಸಲಹೆ ನೀಡಿದರು.
ಕನ್ನಡ ಶಿಕ್ಷಕಿ ಗಿರಿಜಾ ಮಾತನಾಡಿ, “ಜವಾಹರಲಾಲ್ ನೆಹರು ಮಹಾನ್ ದೇಶಭಕ್ತ ವಿದ್ವಾಂಸರಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರ ಪಾತ್ರವಹಿಸಿದ್ದರು. ಅವರು ಪ್ರಧಾನ ಮಂತ್ರಿಯಾಗಿದ್ದಾಗ ದೇಶದ ಅಭಿವೃದ್ಧಿಗೆ ಶ್ರಮಿಸಿದರು. ಇಂದಿನ ಮಕ್ಕಳು ನಾಳೆಯ ಪ್ರಜೆಗಳು; ದೇಶದ ಏಳಿಗೆಗೆ ಒಳ್ಳೆಯ ಮೌಲ್ಯಗಳೊಂದಿಗೆ ಬೆಳೆಬೇಕು” ಎಂದು ಹೇಳಿದರು.
ಶಾಲೆಯ ಆಡಳಿತಾಧಿಕಾರಿ ಕೆ.ಎಂ. ನಾಗರಾಜು ಮಕ್ಕಳಿಗೆ ಶುಭಹಾರೈಸಿ, “ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಉತ್ತಮ ಕನಸು ಕಾಣಬೇಕು. ಗುರಿ, ಸಮಯಪ್ರಜ್ಞೆ ಮತ್ತು ಸ್ಪರ್ಧಾತ್ಮಕ ಮನೋಭಾವ—ಇವು ಯಶಸ್ಸಿನ ಗುಟ್ಟುಗಳು” ಎಂದರು.
ಕಾರ್ಯಕ್ರಮದ ಅಂಗವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿದ್ದು ಮಕ್ಕಳ ದಿನಾಚರಣೆಯ ಸಂಭ್ರಮವನ್ನು ಮತ್ತಷ್ಟು ರಂಗೇರಿಸಿತು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಶಾಲೆಯ ಬೋಧಕ–ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.










