ಹಾಸನ: ಜಿಲ್ಲೆಯ ಜನರ ಬಹುಕಾಲದ ಕನಸಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (HIMS)ಯ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಒಟ್ಟು ರೂ. 2793 ಕೋಟಿ ಅನುದಾನ ಬಿಡುಗಡೆಗೆ ಹಸಿರು ನಿಶಾನ ತೋರಿದೆ ಎಂದು ಹಿಮ್ಸ್ ಆಡಳಿತ ಪರಿಷತ್ ಸದಸ್ಯ ರವೀಶ್ ಬಸವಾಪುರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈಗಾಗಲೇ ರೂ. 8.96 ಕೋಟಿ ಅನುದಾನ ಬಿಡುಗಡೆ ಮಾಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗಿತ್ತು. ಇದೀಗ ಆಸ್ಪತ್ರೆಯನ್ನು ಸಂಪೂರ್ಣ ಕಾರ್ಯೋನ್ಮುಖಗೊಳಿಸಲು ಅಗತ್ಯವಿರುವ ಪ್ರಥಮ ಹಂತದ ಉಪಕರಣಗಳು, ಪೀಠೋಪಕರಣಗಳು ಸೇರಿದಂತೆ ಕಾರ್ಡಿಯಾಕ್ ಯುನಿಟ್ ಮತ್ತು ಕ್ಯಾಥ್ ಲ್ಯಾಬ್ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದರು.
ಪ್ರಾರಂಭಿಕ ಹಂತದಲ್ಲಿ ಕಾರ್ಡಿಯಾಲಜಿ, ನ್ಯೂರಾಲಜಿ, ನ್ಯೂರೋ ಸರ್ಜರಿ, ಯುರಾಲಜಿ ಮತ್ತು ಕಾರ್ಡಿಯಾ ಥೋರಾಸಿಕ್ ಸರ್ಜರಿ ಸೇರಿದಂತೆ 5 ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಜೊತೆಗೆ ಆಸ್ಪತ್ರೆ ಕಟ್ಟಡದ ನೆಲ ಮಹಡಿ ಮತ್ತು ಮೊದಲ ಮಹಡಿಗೆ ಅಗತ್ಯವಿರುವ ವಿವಿಧ ಸೇವೆಗಳಿಗಾಗಿ ರೂ. 21 ಕೋಟಿ ಬಿಡುಗಡೆ ಮಾಡಲು ಸಹ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಜನರ ಆರೋಗ್ಯದ ಅವಶ್ಯಕತೆಗಳನ್ನು ಮನಗಂಡು ಈ ಭಾರೀ ಅನುದಾನವನ್ನು ಒದಗಿಸಿರುವ ಸರ್ಕಾರದ ನಿರ್ಧಾರವನ್ನು ಜಿಲ್ಲೆ ನಾಗರಿಕರು ಸ್ವಾಗತಿಸಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಹಾಸನ ಜನರ ಪರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಿಲ್ಲೆಯ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಂಸದ ಶ್ರೇಯಸ್ ಪಟೇಲ್, ಹಾಗೂ ಮಾಜಿ ಸಚಿವ ಬಿ. ಶಿವರಾಮ್ ಅವರಿಗೆ ವಿಶೇಷ ಧನ್ಯವಾದಗಳನ್ನು ಹಿಮ್ಸ್ ಆಡಳಿತ ಪರಿಷತ್ ಸದಸ್ಯರು ತಿಳಿಸಿದರು.
ಹೊಸ ವಿಭಾಗಗಳು ಮತ್ತು ಕ್ಯಾಥ್ ಲ್ಯಾಬ್ ಕಾರ್ಯನಿರ್ವಹಣೆ ಆರಂಭವಾದ ನಂತರ, ಜಿಲ್ಲೆಯಿಂದ ಹೊರಗೆ ಹೋಗದೆ ಹೆಚ್ಚಿನ ಚಿಕಿತ್ಸೆಗಳನ್ನು ಸ್ಥಳೀಯವಾಗಿ ಪಡೆಯುವ ಅವಕಾಶ ಜಿಲ್ಲೆಯ ಜನತೆಗೆ ಲಭ್ಯವಾಗಲಿರುವುದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲುಗಲೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಧು ನಾಯ್ಸ್, ಅಶೋಕ್, ಮಹೇಶ್ ಹಾಗೂ ಇತರರು ಉಪಸ್ಥಿತರಿದ್ದರು.










