13.6 C
Munich
Home ಜಿಲ್ಲೆ ಹಾಸನ: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಯತ್ನ ಆರೋಪ

ಹಾಸನ: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಯತ್ನ ಆರೋಪ

ಹಾಸನ: ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ಥರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಸರ್ಕಾರಿ ಭೂಮಿ ಕಬಳಿಸಲು ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಮುಂದಾಗಿವೆ ಎಂದು ಸಕಲೇಶಪುರ ತಾಲೂಕು, ಬೆಳಗೋಡು ಹೋಬಳಿ ಕೆಲವಳ್ಳಿ ಮತ್ತು ಹೆಗ್ಗೋವೆ ಗ್ರಾಮಸ್ಥರು ಆರೋಪಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗ್ರಾಮದ ಹಿರಿಯ ಹೆಚ್.ಇ.ರಾಜು, ಸರ್ವೆ ನಂ. ೭, ೧೦ ಮತ್ತು ೭೪ ರಲ್ಲಿ ಸುಮಾರು ೮೦ ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸುವ ಹುನ್ನಾರ ನಡೆದಿದೆ ಎಂದು ದೂರಿದರು. ಬೆಂಗಳೂರು ಮೂಲದ ಜಯರಾಂ ಎಂಬುವರು ಸರ್ವೆಯರ್ ಕರೆದುಕೊಂಡು ಬಂದು ಸರ್ವೆ ಮಾಡಲು ಪ್ರಯತ್ನಿಸಿದಾಗ ನಾವು ಅಡ್ಡಿಪಡಿಸಿದ್ದೇವೆ. ಸ್ಥಳದಲ್ಲೇ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದೇವೆ ಎಂದರು.

ಮುಂದುವರಿದು ಸರ್ಕಾರಿ ಇಲಾಖೆಗಳನ್ನು ಸಂಪರ್ಕ ಮಾಡಿದರೆ ಹೇಮಾವತಿ ಸಂತ್ರಸ್ಥರಿಗೆ ಹಂಚಿಕೆ ಮಾಡಲೆಂದು ಈ ಎರಡೂ ಗ್ರಾಮಗಳಲ್ಲಿ ಯಾವುದೇ ಭೂಮಿ ಕಾಯ್ದಿರಿಸಿಲ್ಲ. ಅದಕ್ಕೆ ಸಂಬಂಧಿಸಿದ ದಾಖಲೆಗಳೂ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಆದರೆ ಜಯರಾಂ ಎಂಬಾತ ಹಿಂದೆ ಗೋಮಾಳ ಆಗಿದ್ದನ್ನು ವಾಮ ಮಾರ್ಗದ ಮೂಲಕ ನಕಲಿ ದಾಖಲೆ ಸೃಷ್ಟಿಸಿ ತನ್ನಂತೆ ಮಾಡಿಕೊಳ್ಳಲು ಬಂದಿದ್ದಾನೆ ಎಂದು ಆರೋಪಿಸಿದರು.

ಅಷ್ಟೇ ಅಲ್ಲದೆ ೧೯೯೯-೨೦೦೦ ರಲ್ಲಿ ಸರ್ಕಾರಿ ಗೋಮಾಳವನ್ನು ತಮ್ಮಂತೆ ಮಾಡಿಕೊಂಡಿದ್ದವರ ಆರ್‌ಟಿಸಿ(ಪಹಣಿಯನ್ನು) ಆಗಿನ ಜಿಲ್ಲಾಧಿಕಾರಿಗಳು ವಜಾ ಮಾಡಿದ್ದಾರೆ. ಆದರೂ ನಕಲಿ ದಾಖಲೆಗಳ ಆಧಾರದಲ್ಲಿ ಹೊಸ ಸರ್ವೆ ನಂಬರ್ ಸೃಷ್ಟಿ ಮಾಡಿ ಭೂಮಿ ವಶಕ್ಕೆ ಪಡೆಯಲು ಪ್ರಯತ್ನ ನಡೆಯುತ್ತಿದೆ.
ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಭೂಮಾಫಿಯಾದ ಪ್ರಭಾವದ ಬಗ್ಗೆ ಅನುಮಾನ ಹುಟ್ಟಿಸಿದೆ. ಸರ್ಕಾರಿ ಭೂಮಿ ಉಳಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರ ಮತ್ತು ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುನೀಲ್, ಮಾದೇಶ್, ಗಗನ್, ಸಂದೀಪ್, ಸುರೇಶ್ ಇತರರಿದ್ದರು.

error: Content is protected !!