ಹಾಸನ: ಒಳ ಮೀಸಲಾತಿ ಜಾರಿಯಾದ ನಂತರ ಮಾದಿಗ ಹಾಗೂ ಇತರೆ ಸಮನಾಂತರ ಜಾತಿಗಳ ಅರ್ಜಿದಾರರಿಗೆ ಜಾತಿ ಪ್ರಮಾಣ ಪತ್ರ ನೀಡುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕೂಲಂಕಷ ಪರಿಶೀಲನೆ ನಡೆಸಬೇಕು ಎಂದು ಮಾದಿಗ ದಂಡೋರ ಸಮಿತಿ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ತೆರಣ್ಯ ಒತ್ತಾಯಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮಾದಿಗ ಜಾತಿಯವರಿಗೆ ಪ್ರವರ್ಗ-೧ ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂಬ ನಿಯಮವಿದೆ.
ಇದಕ್ಕೂ ಮುನ್ನ ಅಫಿಡವಿಟ್ ಸಲ್ಲಿಸಬೇಕು.ಅದರಲ್ಲಿ ಮಾದಿಗ, ಕೊರಚ, ಕೊರಗ ಇತ್ಯಾದಿ ಮೂಲ ಜಾತಿಯನ್ನು ನಮೂದಿಸಲೇಬೇಕು. ಇದಲ್ಲವನ್ನು ಪರಿಶೀಲಿಸಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಅಂದರೆ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಿಕರು, ತಹಸೀಲ್ದಾರರು ಎಲ್ಲವನ್ನೂ ಕೂಲಂಕಷ ಪರಿಶೀಲನೆ ನಡೆಸಿದ ನಂತರವೇ ಕ್ಯಾಸ್ಟ್ ಸರ್ಟಿಫಿಕೇಟ್ ನೀಡಬೇಕು. ಪಡೆಯುವವರೂ ಅವರವರ ಮೂಲ ಜಾತಿಯನ್ನು ನಮೂದಿಸಬೇಕು ಎಂದು ಮನವಿ ಮಾಡಿದರು. ಇಲ್ಲದಿದ್ದರೆ ಜಾತಿ ಮರೆಮಾಚಿ ಸುಳ್ಳು ಜಾತಿ ಪ್ರಮಾಣ ಪತ್ರ ಹಂಚಿಕೆ ಆಗುವ ಸಾಧ್ಯತೆ ಇದೆ ಎಂದರು.
ಹೊಸದಾಗಿ ಜಾತಿ ಪ್ರಮಾಣ ಪತ್ರ ನೀಡಲು ಅಟಲ್ ಜೀ ತಂತ್ರಾಂಶದ ಅಡಿಯಲ್ಲಿ ಸಾಫ್ಟ್‌ವೇರ್ ಸಿದ್ಧಗೊಳಿಸಲಾಗಿದೆ. ಆದರೆ ಅದು ಅಷ್ಟೊಂದು ಅಪ್‌ಡೇಟ್ ಆಗಿಲ್ಲ. ಕೂಡಲೇ ಲೋಪದೋಷ ಸರಿಪಡಿಸಿ ವೇಗವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ ವಿಜಯಕುಮಾರ್, ಸಂವಿಧಾನಕ್ಕೆ ಅಪಮಾನವಾಗುವ ಘಟನೆ ನಡೆದಿದ್ದರೂ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಏನು ಮಾಡುತ್ತಿದೆ, ಏಕೆ ನಿಷ್ಕ್ರಿಯವಾಗಿದೆ ಎಂದು ಪ್ರಶ್ನಿಸಿದರು.
ಆಯೋಗದ ಈ ನಿರ್ಲಕ್ಷ್ಯ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇದೇ ತಿಂಗಳ ೧೫ ರಂದು ದೆಹಲಿಯ ಜಂತರ್ ಮಂಥರ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆ ಪ್ರತಿಭಟನೆಯಲ್ಲಿ ಜಿಲ್ಲೆ, ರಾಜ್ಯದಿಂದಲೂ ಭಾಗಿಯಾಗುತ್ತಿದ್ದೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಭೈರೇಶ್ ಹಳೇಬೀಡು, ಸತೀಶ್, ವಿಜಯ್, ಮಂಜುನಾಥ್ ಮೊದಲಾದವರಿದ್ದರು.










