ಹಾಸನ: ಸರ್ಡಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮದಿನಾಚರಣೆ ಪ್ರಯುಕ್ತ ನ.೧೭ ರಂದು ನಗರದಲ್ಲಿ ಭವ್ಯವಾದ ಏಕತಾ ನಡಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ತಿಳಿಸಿದರು.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಸರ್ದಾರ್ ಯೂನಿಟಿ ಅಭಿಯಾನವನ್ನು ರಾಷ್ಟ್ರವ್ಯಾಪಿ ಹಮ್ಮಿಕೊಳ್ಳಲಾಗಿದೆ ಎಂದರು.
ಅಂತೆಯೇ ಜಿಲ್ಲೆಯಲ್ಲಿ ನ.೧೭ರ ಬೆಳಿಗ್ಗೆ ೧೦ ಗಂಟೆಗೆ ರೈಲ್ವೆ ನಿಲ್ದಾಣದಿಂದ ಏಕತಾ ನಡಿಗೆ ಆರಂಭವಾಗಲಿದೆ ಎಂದು ಹೇಳಿದರು.
ಅಲ್ಲಿಂದ ಹೊರಟು, ಬಿಎಂ. ರಸ್ತೆ, ಡಿಸಿ ಕಚೇರಿ ಮುಂಭಾಗ ಹಾದು, ಎನ್.ಆರ್.ವೃತ್ತ, ಹೇಮಾವತಿ ಪ್ರತಿಮೆ ಮೂಲಕ ಮಧ್ಯಾಹ್ನ ೧೨ ಗಂಟೆ ವೇಳೆಗೆ ಜಿಲ್ಲಾ ಕಸಾಪ ಭವನ ತಲುಪಿ, ಅಲ್ಲೇ ಸಮಾಪ್ತಿಯಾಗಲಿದೆ ಎಂದು ತಿಳಿಸಿದರು.
ಏಕತಾ ನಡಿಗೆಯಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಯುವಕರು ಹಾಗೂ ನಾಗರಿಕರಲ್ಲಿ ರಾಷ್ಟ್ರಭಕ್ತಿ ಮತ್ತು ಏಕತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಉಸ್ತುವಾರಿಯನ್ನಾಗಿ ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಚಲನಚಿತ್ರ ನಟ ಜಗ್ಗೇಶ್ ಅವರನ್ನು ನೇಮಿಸಲಾಗಿದೆ ಎಂದರು.
ರಾಷ್ಟ್ರದಾದ್ಯಂತ ನಡೆಯಲಿರುವ ಈ ಕಾರ್ಯಕ್ರಮದ ಅಂತಿಮ ಹಂತದಲ್ಲಿ ಗುಜರಾತ್‌ನಲ್ಲಿ ೧೮೦ ಕಿಲೋ ಮೀಟರ್ ಉದ್ದದ ಪಾದಯಾತ್ರೆ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಹಾಸನದಲ್ಲಿ ನಡೆಯುವ ನಡಿಗೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಕೇಂದ್ರ ಕ್ರೀಡಾ ಸಚಿವಾಲಯದ ಅಧಿಕಾರಿ ಅಖಿಲ್ ಅವರು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಶಾಸಕರು, ಸಂಸದರು ಹಾಗೂ ಅಧಿಕಾರಿಗಳನ್ನು ಆಹ್ವಾನಿಸಲಿದ್ದಾರೆ. ಇದು ಪಕ್ಷಾತೀತವಾಗಿ ನಡೆಯುತ್ತಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಅಖಿಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಮಿತ್ ಶೆಟ್ಟಿ ಮತ್ತು ಗಿರೀಶ್ ಉಪಸ್ಥಿತರಿದ್ದರು.










