14.2 C
Munich
Home ಕ್ರೈಮ್‌ ಬೇಲೂರು: ಮದ್ದಾನೆ ಕಾಳಗಕ್ಕೆ ಬೆಚ್ಚಿದ ಜಗಬೋರನಹಳ್ಳಿ- ದೈತ್ಯ ಭೀಮನ ಕೋರೆಯನ್ನೆ ಉದುರಿಸಿದ ಕ್ಯಾಪ್ಟನ್!

ಬೇಲೂರು: ಮದ್ದಾನೆ ಕಾಳಗಕ್ಕೆ ಬೆಚ್ಚಿದ ಜಗಬೋರನಹಳ್ಳಿ- ದೈತ್ಯ ಭೀಮನ ಕೋರೆಯನ್ನೆ ಉದುರಿಸಿದ ಕ್ಯಾಪ್ಟನ್!

ಹಾಸನ: ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಜಗಬೋರನಹಳ್ಳಿ ಇಂದು ರಣಾಂಗಣವಾಗಿ ಮಾರ್ಪಟ್ಟಿತ್ತು. ದೈತ್ಯ ಕಾಡಾನೆಗಳಾದ ಭೀಮ ಹಾಗೂ ಕ್ಯಾಪ್ಟನ್ ನಡುವೆ ಅಕ್ಷರಶಃ ಯುದ್ಧವೇ ನಡೆದು ಹೋಯಿತು.

ಜಗಬೋರನಹಳ್ಳಿಯಲ್ಲಿ ಎದುರುಬದುರಾದ ಸಲಗಗಳು ಪರಸ್ಪರ ಕಾಳಗಕ್ಕಿಳಿದವು. ಮದವೇರಿದ ಆನೆಗಳು ಊರಿನೊಳಗೆ ನುಗ್ಗಿ ಮುಖ್ಯ ರಸ್ತೆಯಲ್ಲೆ ಮನೆ ಬಂದಂತೆ ಓಡಿದವು.

ಊರಿನಲ್ಲಿ ಇದ್ದಕ್ಕಿದ್ದಂತೆ ಉಂಟಾದ ಈಗ ಕಾಳಗ ಕಂಡು ಜನರು ಸಿಕ್ಕೆಡೆಗೆ ಓಡಿ ಜೀವ ಉಳಿಸಿಕೊಂಡರು. ಆನೆ ಕ್ಷಿಪ್ರಕಾರ್ಯಪಡೆಯ ಸಿಬ್ಬಂದಿ ಆನೆಗಳನ್ನು ಹಿಂಬಾಲಿಸಿಕೊಂಡು ಬಂದರೂ ಎರಡೂ ಆನೆಗಳ ರೌದ್ರಾವತಾರದೆದುರು ಅಸಹಾಯಕರಾಗಬೇಕಾಯಿತು.

ಅಲ್ಲಿನ ಮನೆಯೊಂದರ ಆವರಣಕ್ಕೆ ನುಗ್ಗಿದ ಕ್ಯಾಪ್ಟನ್, ಭೀಮನೊಂದಿಗೆ ಬಡಿದಾಟಕ್ಕೆ ನಿಂತಿತು. ಇದರಿಂದ ಮನೆಯ ಜನರು ಕಕ್ಕಾಬಿಕ್ಕಿಯಾದರು. ರೊಚ್ಚಿಗೆದ್ದ ಕ್ಯಾಪ್ಟನ್ ಆನೆಯಲ್ಲಿ ದೇವರನ್ನು ಕಂಡ ಮನೆ ಮಾಲಕಿ ‘ಅಪ್ಪ ನನ್ನ ದೇವರೆ’ ಎಂದು ಕೈಮುಗಿದರು.

ಕೊಂಚ ಹಿಂದೆಗೆದ ಭೀಮ ಮನೆ ಎದುರಿನ ಬೇಲಿ ಕಡೆಗೆ ನುಗ್ಗಿದಾಗ ಅಲ್ಲಿ ಗೊಂತಿಗೆ ಕಟ್ಟಿದ್ದ ಹಸುಗಳು ಪ್ರಾಣಾಪಾಯಕ್ಕೆ ಸಿಲುಕಿದವು. ಒಂದೆರಡು ಹಸುಗಳು ಹಗ್ಗ ಕಿತ್ತುಕೊಂಡು ಓಡಿ ಪ್ರಾಣ ಉಳಿಸಿಕೊಂಡವು.

ಕ್ಯಾಪ್ಟನ್ ಆಕ್ರೋಶದಿಂದ ಮನೆ ಎದುರು ಇರಿಸಿದ್ದ ನೀರು ತುಂಬಿದ್ದ ಸಿಂಟೆಕ್ಸ್ ಟ್ಯಾಂಕನ್ನು ತನ್ನ ದಂತಗಳಿಂದ ಒಡೆದು ಛಿದ್ರಗೊಳಿಸಿತು. ನಂತರ ಪಕ್ಕದಲ್ಲಿದ್ದ ಎತ್ತಿನ ಗಾಡಿಯತ್ತ ನುಗ್ಗಿದ ಆನೆ ಸೊಂಡಿನಿಂದ ಗಾಡಿಯನ್ನು ಎತ್ತಿ‌ ಕುಕ್ಕಿತು. ಇದರಿಂದ ಗಾಡಿ ಜಖಂಗೊಂಡಿತು.

ನಂತರ ಜರುಗಿದ ಆನೆಗಳ ಭೀಕರ ಕಾಳಗದಲ್ಲಿ ಭಾರಿ ದೈತ್ಯನಾದ ಭೀಮನ ಒಂದು ದಂತವೇ ಮುರಿದು ಬಿದ್ದಿತು. ತನ್ನ ಎರಡೂ ಬೃಹತ್ ದಂತಗಳಿಂದ ತನ್ನ ಗಾಂಭೀರ್ಯದಿಂದ ನಡೆದು ಬರುವ ಕಾರಣಕ್ಕೆ ಅಭಿಮಾನಿಗಳನ್ನು ಸಂಪಾದಿಸಿರುವ ಭೀಮ ಈಗ ಒಂಟಿಕೊಂಬನಾಗುವಂತಾಗಿದೆ. ಘರ್ಷಣೆಯಲ್ಲಿ ಕ್ಯಾಪ್ಟನ್ ಕೂಡ ಗಾಯಗೊಂಡಿದ್ದು, ರಕ್ತ ಸುರಿಸುತ್ತಾ ಓಡಾಡಿತು.

ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಎರಡೂ ಆನೆಗಳನ್ನು ಪ್ರತ್ಯೇಕಿಸಿ ದೂರ ಅಟ್ಟುವಲ್ಲಿ ಯಶಸ್ವಿಯಾಗಿದ್ದು, ಮದಿಸಿದ ಆನೆಗಳ ಯುದ್ಧದಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

error: Content is protected !!