10.4 C
Munich
Home News ಚನ್ನರಾಯಪಟ್ಟಣ: ಜೈನಕಾಶಿಯ ಇತಿಹಾಸ ಪುಟಕ್ಕೆ ಮತ್ತೆರಡು ಹಿರಿಮೆ ಸೇರ್ಪಡೆ

ಚನ್ನರಾಯಪಟ್ಟಣ: ಜೈನಕಾಶಿಯ ಇತಿಹಾಸ ಪುಟಕ್ಕೆ ಮತ್ತೆರಡು ಹಿರಿಮೆ ಸೇರ್ಪಡೆ

– ಆರ್. ಶ್ರೀನಿವಾಸ್ ಉಳ್ಳಾವಳ್ಳಿ

ಚನ್ನರಾಯಪಟ್ಟಣ: ತಾಲೂಕಿನ ಧಾರ್ಮಿಕ ಕ್ಷೇತ್ರ ಹಾಗೂ ವಿಶ್ವವಿಖ್ಯಾತಿ ಜೈನಕಾಶಿ ಶ್ರವಣಬೆಳಗೊಳವು ಚಂದ್ರಗಿರಿ ಹಾಗೂ ಇಂದ್ರಗಿರಿ ಬೆಟ್ಟಗಳು ಸೇರಿದಂತೆ ಏಕಶಿಲಾ ಶ್ರೀ ಬಾಹುಬಲಿ ಮೂರ್ತಿಯೊಂದಿಗೆ ತನ್ನದೇ ಆದ ಮಹತ್ವ ಹೊಂದಿದ್ದು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ.

ಇದೀಗ ಚಾರುಗಿರಿ ಹಾಗೂ ಶಾಂತಿಗಿರಿ ಬೆಟ್ಟಗಳು ಸೇರ್ಪಡೆಯಾಗುವ ಮೂಲಕ ಮತ್ತಷ್ಟು ಹಿರಿಮೆ ಹೆಚ್ಚಿಸಿದೆ.

ಶ್ರೀ ಕ್ಷೇತ್ರದ ನೂತನ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಮ್ಮ ವಿನೂತನ ದೃಷ್ಟಿಕೋನದಿಂದ ಕ್ಷೇತ್ರದ ಬೆಳಕನ್ನು ಎಲ್ಲೆಡೆ ಹರಡುವಲ್ಲಿ ಕಾರ್ಯ ನಿರ್ತರಾಗಿದ್ದಾರೆ.

ತಮ್ಮ ದೀಕ್ಷಾಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನಿಷಿಧಿ ಮಂಟಪ ನಿರ್ಮಿಸುವ ಮೂಲಕ ಆ ಪ್ರದೇಶವನ್ನು ಚಾರುಗಿರಿ ಯನ್ನಾಗಿ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 20ನೇ ಶತಮಾನದ ಪ್ರಥಮಚಾರ್ಯ ಚಾರಿತ್ರ ಚಕ್ರವರ್ತಿ ಆಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜ ಅವರ ಹತ್ತು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ದೊಡ್ಡ ಬೆಟ್ಟಕ್ಕೆ ಹೊಂದಿಕೊಂಡಿರುವ ಮತ್ತೊಂದು ಚಿಕ್ಕ ಬೆಟ್ಟದಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಶಾಂತಿಗಿರಿ ಅನಾವರಣಕ್ಕೆ ಮುಂದಾಗಿದ್ದಾರೆ.

ಅಲ್ಲದೆ ಬೆಂಗಳೂರು ರಸ್ತೆಯಲ್ಲಿರುವ ಚಿಕ್ಕ ಬೆಟ್ಟಕ್ಕೆ ಹೊಂದಿಕೊಂಡಂತ್ತಿರುವ ಮತ್ತೊಂದು ಪ್ರದೇಶದ 5ನೇ ಬೆಟ್ಟವನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವ ಸಂಕಲ್ಪ ಹೊಂದಿದ್ದಾರೆ. ಈ ಐದನೇ ಬೆಟ್ಟದಲ್ಲಿ ಶ್ರೀ ಕ್ಷೇತ್ರದಿಂದ ಧಾರ್ಮಿಕ ಬೆಳಕನ್ನು ವಿಶ್ವಕ್ಕೆ ಬೆಳಗಿಸಿದ ಮಹನೀಯರಾದ ಭದ್ರಬಾಹು ಮುನಿಗಳು, ಚಾವುಂಡರಾಯ, ಕಾಳಲಾದೇವಿ, ಗುಳ್ಳಕಾಯಿ ಅಜ್ಜಿ, ಗಂಗರಾಜ, ಶುಭಚಂದ್ರಾ ಚಾರ್ಯರು ಸೇರಿದಂತೆ ಮುಂತಾದವರ ಪ್ರತಿಮೆಗಳನ್ನು ಸ್ಥಾಪಿಸಿ ಅವರ ಕುರಿತಂತೆ ಶಿಲಾ ಶಾಸನಗಳನ್ನು ಅಳವಡಿಸುವ ಮೂಲಕ ಮತ್ತೊಂದು ಇತಿಹಾಸ ತಾಣವನ್ನಾಗಿಸುವ ದೂರದೃಷ್ಟಿ ಶ್ರೀಗಳದ್ದಾಗಿದೆ.

ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಹಿನ್ನೆಲೆ:
ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರು 19ನೇ ಶತಮಾನದ ಆಷಾಢ ಕೃಷ್ಣ ಪಕ್ಷ ಬುಧವಾರ ಜುಲೈ 25, 1872ರಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ‘ಭೋಜ’ ಗ್ರಾಮದ ಸಂಪ್ರದಾಯಸ್ಥ ಸ್ಯಾದ್ವಾದ ಸಂಸ್ಕೃತಿಯ ಆದರ್ಶ ಜೈನ ಕುಟುಂಬದ ಭೀಮಗೌಡ ಮತ್ತು ಸತ್ಯವತಿ ದಂಪತಿಗಳ ಸುಪುತ್ರರಾಗಿ ತಾಯಿಯ ತವರು ‘ಯಳಗೋಡ’ ಗ್ರಾಮದಲ್ಲಿ ಸಾತಗೌಡ ಪಾಟೀಲರೆಂಬ ಶುಭನಾಮಧೇಯದಿಂದ ಜನ್ಮ ತಾಳಿದರು.

ಬಾಲ್ಯದಿಂದಲೇ ಅಂತರ್ಮುಖಿಯಾಗಿದ್ದ ಸಾತಗೌಡ ಪಾಟೀಲರು ಲೌಕಿಕ ಬದುಕನ್ನು ತಿರಸ್ಕರಿಸುತ್ತಲೇ, ಆಧ್ಯಾತ್ಮಿಕ ಬದುಕನ್ನು ಅಪ್ಪಿ ಮುದ್ದಾಡುತ್ತಿದ್ದರು. ಮನದ ನೈರ್ಮಲ್ಯವನ್ನು ಸಾಧಿಸಲು ದೇಹದ ಮೇಲೆ ಮಲವನ್ನು ಧರಿಸಲು ಸಿದ್ಧರಾಗಿದ್ದರು. ಗೃಹಸ್ಥದಲ್ಲಿದ್ದರೂ ವೈರಾಗಿಯಾಗಿ, ವೈರಾಗ್ಯದಲ್ಲಿ ಅನುರಕ್ತರಾಗಿ ಅತೀವ ಆನಂದದ ಅನುಭವ ವನ್ನುಂಡು ವಿರಾಗದ ಮೇರುವಿನಂತೆ ಜಗತ್ತಿಗೆ ಕಂಡರು.

ಬಾಲ್ಯದಿಂದ ಬದುಕಿನುದ್ದಕ್ಕೂ ‘ಬದುಕು ಬದುಕಲು ಬಿಡು’ ಎಂಬ ತತ್ವದಡಿ ಜೀವನ ರೂಪಿಸಿಕೊಂಡು ‘ಪ್ರಾಣಿ ದಯೆಯೇ ಧರ್ಮದ ಗುರಿ’ ಎಂದರಿತು ನಡೆದು ಎಲ್ಲಾ ಜೀವಿಗಳಲ್ಲೂ ಪ್ರೀತಿ, ಮಮತೆ, ಕರುಣೆ ತೋರಿ ಯಾರೊಂದಿಗೂ ಶತ್ರುತ್ವ ಭಾವ ತೋರದೇ ಎಲ್ಲರೊಂದಿಗೂ ಮಿತೃತ್ವದಿಂದ ಕೂಡಿ ನಡೆದು ‘ದಯಾಸಿಂಧು’ ‘ಪ್ರೇಮಬಂಧು’ ಎಂದೆನಿಸಿ ಸಂಯಮ ಪಥದಲ್ಲಿ ಸಾಗಿ ಆತ್ಮ ಜ್ಯೋತಿಯನ್ನು ಸಮುಜ್ವಲಗೊಳಿಸಿದ ಮಹಾನ್ ತ್ಯಾಗಿಯಾದವರು.

ಸಾತಗೌಡರು 22ನೇ ವಯೋಮಾನದಲ್ಲಿ ಮಹೀಷವಾಡಿ ಗ್ರಾಮದಲ್ಲಿ ವಿರಕ್ತಭಾವ ಹೊಂದಿ ಸಿದ್ಧಸಾಗರರಿಂದ ಬ್ರಹ್ಮಚರ್ಯ ವ್ರತ ಸ್ವೀಕಾರ ಮಾಡಿ ಬಾಹ್ಯದ ಪ್ರತೀಕ್ಷೆಯನ್ನು ತ್ಯಜಿಸಿ ಮೋಕ್ಷ ಮಾರ್ಗದಲ್ಲಿ ಮಾಡಿದರು. ಮುಂದೆ ದಿನ ಕಳೆದಂತೆ ಅಂತರ್ಮುಖಿಯಾಗಿ ವೈರಾಗ್ಯದ ಚರ್ಚೆಯಲ್ಲಿದ್ದೂ ಮುನಿಶ್ರೀ ಆದಿಸಾಗರ (ಭೋಸೆ) ರವರ ಸಾನಿಧ್ಯದಲ್ಲಿದ್ದು, ಆತ್ಮ ಕಲ್ಯಾಣದ ಹಾದಿ ಹಿಡಿದು, ಆಹಾರ ಕ್ರಮ, ಶಯನ ಕ್ರಮ, ವಿಹಾರಗಳಲ್ಲಿ ತ್ಯಾಗಿಗಳ ಜೀವನ ಕ್ರಮವನ್ನು ಅಳವಡಿಸಿಕೊಂಡು ಪ್ರತಿಮಾಧಾರಿಗಳೆನಿಸಿದರು.

ಸಾತಗೌಡರು ದಿಗಂಬರ ದೀಕ್ಷೆ ಪಡೆಯುವ ಪೂರ್ವದಲ್ಲಿ ಕ್ರಿ.ಶ. ೧೯೧೨ರಲ್ಲಿ ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಆಗಮಿಸಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ದರ್ಶನ ಪಡೆದು ಆಗೀನ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳವರ ಜೊತೆ ಧರ್ಮ ಚರ್ಚೆಯನ್ನು ನಡೆಸಿ ವೈರಾಗ್ಯ ನೆಲೆಯನ್ನು ಉತ್ತಮ ಪಡಿಸಿಕೊಂಡು ಉತ್ತರ ಕರ್ನಾಟಕದೆಡೆಗೆ ವಿಹಾರ ಮಾಡಿದರು.

ಮುಂದೆ ದಿಗಂಬರ ಮುನಿಗಳು ವಿರಳವಾಗಿದ್ದ ಕಾಲದಲ್ಲಿ ತ್ಯಾಗಿ ಜೀವನದ ಅಸ್ತಂ ಹಿಡಿದೂ ಭವ ಸಾಮ್ರಾಜ್ಯವನ್ನು ಗೆಲ್ಲಲೂ ಸಿದ್ದರಾಗಿ ಧರ್ಮ ರಕ್ಷಣೆಯತ್ತ ಮುನ್ನಡೆದು ಸಾಂಸಾರಿಕ ಬಂಧನಗಳನ್ನು ಕಾಲಕ್ರಮೇಣ ಕಳಚಿ, ಸಾತಗೌಡರು ೪೨ನೇ ವಯೋಮಾನದಲಿ ಕ್ರಿ.ಶ.೧೯೧೫ ಜೂನ್ ೨೫ರ, ಜೇಷ್ಠ ಶುಕ್ಲ ತ್ರಯೋದಶಿಯಂದು ದೇವೇಂದ್ರ ಕೀರ್ತಿ ಮುನಿಗಳಿಂದ ‘ಉತ್ತೂರು’ ಪಂಚಕಲ್ಯಾಣ ಸಂದರ್ಭದಲ್ಲಿ ಕ್ಷುಲ್ಲಕ ದೀಕ್ಷೆ ಪಡೆದು ಕ್ಷುಲ್ಲಕ ಶ್ರೀ ಶಾಂತಿಸಾಗರರು ಎನಿಸಿದರು.

ಶಾಂತಿಸಾಗರರು ಮುಂದೆ ಮೂರು ವರ್ಷಗಳ ಅವರ್ಣನೀಯ ಎಡರು-ತೊಡರುಗಳನ್ನು ಎದುರಿಸುತ್ತಾ ಆಗಮೋಕ್ತ ಮಾರ್ಗದಲ್ಲಿ ನಡೆದು ತಮ್ಮ ಧ್ಯಾನ-ಅಧ್ಯಯನಗಳ ಮೂಲಕ ಚಾರಿತ್ರಂವನ್ನು ಬಲಪಡಿಸಿಕೊಳ್ಳುತ್ತಾ ಆತ್ಮಶಕ್ತಿಯನ್ನು ವೃದ್ಧಿಗೊಳಿಸಿ ಜ್ವಾಲಾಮುಖಿಯಂತೆ ಸಿಡಿಯದೇ ಶಾಂತಿಯ ಸಾಗರವೇ ಆಗಿ ಸಮ್ಯಕ್ ತತ್ವ ರೂಪಿ ಅಮೃತಕಳಶವನ್ನು ಎತ್ತಿ ಹಿಡಿದರು.

ಶಾಂತಿ ಸಾಗರರು ಗಿರಿನಾರ್ ಯಾತ್ರೆ ಕೈಗೊಂಡು 1920 ಮಾರ್ಚ್ 2ರಂದು ಸ್ವತ ಮುನಿ ದೀಕ್ಷೆ ಪಡೆದು ಜೈನ ಸಮಾಜಕ್ಕೆ ಮುನಿಚರ್ಯೆಯ ದರ್ಶನ ಮಾಡಿಸಿದರು. 1924ರ ಆಗಸ್ಟ್ 4ರಂದು ಆಚಾರ್ಯ ಪಟ್ಟಕೇರಿಯರು. 1925 ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಭಗವಾನ್ ಶ್ರೀ ಗೊಮ್ಮಟೇಶ್ವರ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಸಾನಿಧ್ಯ ವಹಿಸಿ ಮಹೋತ್ಸವದ ಯಶಸ್ವಿಗೆ ಕಾರಣೀಭೂತರಾದರು.

ಅವರು ಶ್ರವಣಬೆಳಗೊಳಕ್ಕೆ ಬಂದು ಇಂದಿಗೆ 100 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಹಾಗೂ ಅವರಿಂದ ಜೈನ ಧರ್ಮದ ಮುನಿ ಪರಂಪರೆ ಗಟ್ಟಿಯಾಗಿದ್ದು ಇಂದಿಗೂ ಅವರನ್ನು ಸ್ಮರಿಸುವಂತೆ ಮಾಡಿದೆ. ಅವರ ಹೆಸರನ್ನು ಇತಿಹಾಸದಲ್ಲಿ ಚಿರಸ್ಥಾಯಿಯಗಿಸುವ ಉದ್ದೇಶದಿಂದ ಅವರ ಪ್ರತಿಮೆ ಸ್ಥಾಪನೆ ಮಾಡಿ ಕ್ಷೇತ್ರದಲ್ಲಿ ಅವರ ಹೆಸರಿನಲ್ಲಿ ನಾಲ್ಕನೇ ಬೆಟ್ಟದ ಅನಾವರಣ ಮಾಡಲಾಗುತ್ತಿದೆ.

ನಾಳೆ ಶ್ರವಣಬೆಳಗೊಳಕ್ಕೆ ಉಪರಾಷ್ಟ್ರಪತಿಗಳ ಆಗಮನ:
ಆಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜರ ಪ್ರತಿಮೆಯನ್ನು ನ. 9 ರಂದು ಅನಾವರಣ ಮಾಡಲು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಆಗಮಿಸಲಿದ್ದಾರೆ. ಕೇಂದ್ರದ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವ ಹೆಚ್. ಡಿ. ಕುಮಾರಸ್ವಾಮಿ ನಾಲ್ಕನೇ ಬೆಟ್ಟಕ್ಕೆ ಶಾಂತಿಗಿರಿ ಪದನಾಮ ಅನಾವರಣ ಮಾಡಿ ಶಾಂತಿಸಾಗರ ಮಹಾರಾಜರ ಜೀವನ ಚರಿತ್ರೆಯ ಬೃಹತ್ ಶಿಲಾಶಾಸನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮುನಿವರ್ಯರು, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್ ಬಾಲಕೃಷ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ

error: Content is protected !!