11.1 C
Munich
Home ಜಿಲ್ಲೆ ಅರಸೀಕೆರೆ: ನೂರು ಹೊಸ ಸಬ್‌ಸ್ಟೇಷನ್ ಸ್ಥಾಪನೆಗೆ ನಿರ್ಧಾರ — ಇಂಧನ ಸಚಿವ ಕೆ.ಜೆ. ಜಾರ್ಜ್

ಅರಸೀಕೆರೆ: ನೂರು ಹೊಸ ಸಬ್‌ಸ್ಟೇಷನ್ ಸ್ಥಾಪನೆಗೆ ನಿರ್ಧಾರ — ಇಂಧನ ಸಚಿವ ಕೆ.ಜೆ. ಜಾರ್ಜ್

ಅರಸೀಕೆರೆ: ತಾಲ್ಲೂಕಿನ ಅಗ್ಗುಂದ ಗ್ರಾಮದಲ್ಲಿ 11 ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದರು.

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಸಾಕಷ್ಟಿದ್ದರೂ ವಿತರಣೆಗೆ ಅಗತ್ಯವಾದ ಸಬ್‌ಸ್ಟೇಷನ್‌ಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಈ ವರ್ಷ ನೂರು ಸಬ್‌ಸ್ಟೇಷನ್‌ಗಳ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಜೊತೆಗೆ ರಾಜ್ಯದಲ್ಲಿ 2,400 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆಗೆ ಕ್ರಮ ವಹಿಸಲಾಗಿದ್ದು, ಇದರಿಗಾಗಿ ಸುಮಾರು ₹10,000 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.

ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುವಂತೆ ಸರ್ಕಾರ ಕ್ರಮ ವಹಿಸಿದೆ. ನಿತ್ಯ ಏಳು ಗಂಟೆಗಳ ಕರೆಂಟ್ ಪೂರೈಕೆ ನೀಡುವ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆ ಅರಸೀಕೆರೆ ಕ್ಷೇತ್ರದಲ್ಲಿಯೂ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದರು.

ಹಿಂದಿನ ವರ್ಷ ಬರ ಪರಿಸ್ಥಿತಿಯಲ್ಲಿಯೂ ವಿದ್ಯುತ್ ಕೊರತೆ ಉಂಟಾಗಲಿಲ್ಲ. ಈ ವರ್ಷವೂ ಬೇಸಿಗೆ ವೇಳೆಗೆ ಲೋಡ್ ಶೆಡ್ಡಿಂಗ್ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಭರವಸೆ ನೀಡಿದರು.


ಬಿಜೆಪಿಯ ವಿರೋಧಕ್ಕೆ ಸಚಿವರ ಕಿಡಿ

ಬೆಂಗಳೂರು ನಗರದಲ್ಲಿ ಟನಲ್ ನಿರ್ಮಾಣ ಯೋಜನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿರುವ ಕುರಿತು ಮಾತನಾಡಿದ ಸಚಿವರು,

“ಹಿಂದೆ ಸ್ಟೀಲ್ ಬ್ರಿಡ್ಜ್ ಯೋಜನೆಗೂ ವಿರೋಧಿಸಿದ್ದರು. ಶಿವಾನಂದ ಸರ್ಕಲ್‌ನ ಸೇತುವೆಯೂ ಸ್ಟೀಲ್‌ನಿಂದ ನಿರ್ಮಾಣವಾಗಿದೆ. ಸ್ಟೀಲ್ ಇಲ್ಲದೆ ಯಾವ ಯೋಜನೆಯೂ ಸಾಧ್ಯವಿಲ್ಲ. ಬಿಜೆಪಿಯ ಕೆಲವರಿಗೆ ಒಳ್ಳೆಯ ಕೆಲಸ ಸಹಿಸಲು ಆಗುವುದೇ ಇಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ರಸ್ತೆ ಗುಂಡಿಗಳ ಕುರಿತು ಮಾತನಾಡಿದ ಅವರು,

“ಈ ವರ್ಷ ಮಳೆ ಹೆಚ್ಚಾಗಿ ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿವೆ. ಅವು ಸರಿಪಡಿಸಲು ಸರ್ಕಾರ ಹಣ ಬಿಡುಗಡೆ ಮಾಡಿದೆ. ಕಾಂಕ್ರೀಟ್ ರಸ್ತೆಗಳಿರುವ ಕಡೆ ಗುಂಡಿಗಳ ಸಮಸ್ಯೆ ಕಾಣಿಸಿಕೊಂಡಿಲ್ಲ,” ಎಂದು ಹೇಳಿದರು.

ಟನಲ್ ಯೋಜನೆ ಕುರಿತ ಉದಾಹರಣೆ ನೀಡಿದ ಅವರು,

“ಜಪಾನ್‌ನಲ್ಲಿ ನಾಲ್ಕು ದಶಕಗಳ ಹಿಂದೆ ಸಮುದ್ರದಡಿ ಟನಲ್ ನಿರ್ಮಾಣ ಮಾಡಲಾಗಿದೆ. ಪ್ಯಾರಿಸ್ ಹಾಗೂ ಲಂಡನ್ ನಡುವೆಯೂ ಟನಲ್ ಇದೆ. ನಮ್ಮ ಮೆಟ್ರೋ ಯೋಜನೆಯಲ್ಲೂ ಟನಲ್ ನಿರ್ಮಾಣ ನಡೆದಿದೆ. ಅಲ್ಲಿ ಕೆರೆಗಳು ಬತ್ತಿಲ್ಲ,” ಎಂದು ಉದಾಹರಿಸಿದರು.

ಟನಲ್ ಯೋಜನೆ ಕುರಿತಾಗಿ ಬಿಜೆಪಿ ನಾಯಕ ಆರ್. ಅಶೋಕ್ ಮಾಡಿದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಜಾರ್ಜ್,

“ಅವರು ಹೇಳುವಂತೆ ಯಾವುದೇ ಕಮಿಷನ್‌ ವಹಿವಾಟು ನಡೆದಿಲ್ಲ. ಅವರ ಬಳಿ ದಾಖಲೆ ಇದ್ದರೆ ಮಂಡಿಸಲಿ. ದಾಖಲೆ ಇದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಹೇಳಿದರು.

“ಸಿಎಂ ಹಾಗೂ ಡಿಸಿಎಂ ಜನಪರ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ಅಭಿವೃದ್ಧಿ ಕಾರ್ಯ ಮುಂದುವರಿಸಬೇಕು,” ಎಂದು ಹೇಳಿದರು.

error: Content is protected !!