ಚನ್ನರಾಯಪಟ್ಟಣ: ತಾಲ್ಲೂಕಿನ ಅಕ್ಕನಹಳ್ಳಿ ಕೂಡಿನ ದಿಡಗ ರಸ್ತೆಯಲ್ಲಿವ ನವಗ್ರಾಮ ಕಾಲನಿಯಲ್ಲಿ ಕಾಂಕ್ರೀಟ್ ರಸ್ತೆ, ಒಳಚರಂಡಿ ಮತ್ತು ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಕಾಲೋನಿ ನಿವಾಸಿಗಳು ಪ್ರತಿಭಟಿಸಿದರು.
ಹಲವು ವರ್ಷಗಳಿಂದ ಅಕ್ಕನಹಳ್ಳಿ ಕೊಡಿನ ನವಗ್ರಾಮ ಕಾಲನಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಸುಮಾರು 40 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು ಆದರೆ ಇದುವರೆಗೂ ರಸ್ತೆ, ಒಳಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಕಾಲನಿಯ ನಿವಾಸಿಗಳೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮಳೆಗಾಲದಲ್ಲಿ ಓಡಾಡುವುದೇ ಕಷ್ಟ:
ನವಗ್ರಾಮ ಕಾಲನಿಯಲ್ಲಿ ಮಳೆ ಬಂದರೆ ಸಂಪೂರ್ಣ ಕೆಸರುಮಯವಾಗಲಿದ್ದು ಇದರಿಂದ ವೃದ್ಧರು ಹಾಗೂ ಶಾಲೆಗಳಿಗೆ ಹೋಗುವ ಮಕ್ಕಳು ಓಡಾಡುವದೇ ಕಷ್ಟಕರವಾಗಲಿದೆ ಎಂದು ಆರೋಪಿಸಿದರು.
ಅನೇಕ ದಿನಗಳಿಂದ ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಮನವಿ ನೀಡಿದ್ದರು ಸಹ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಕುಮಾರಸ್ವಾಮಿ ಹಿರೇಮಠ್ ತಿಳಿಸಿದರು.
ಅಕ್ಕನಹಳ್ಳಿ ಕೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನವಗ್ರಾಮ ಕಾಲನಿಯಲ್ಲಿ ಹೆಚ್ಚು ಬಡ ಕುಟುಂಬಗಳೇ ವಾಸ ಮಾಡುತ್ತಿದ್ದು ಪ್ರತಿದಿನ ವ್ಯಾಪಾರ ಸೇರಿದಂತೆ ಇನ್ನಿತರ ಕೂಲಿ ಕೆಲಸಗಳಿಗೆ ಜನ ಬೇರೆ ಬೇರೆ ಪ್ರದೇಶಗಳಿಗೆ ಹೋಗುತ್ತಾರೆ. ಆದರೆ ರಸ್ತೆ ಹಾಗೂ ಒಳಚರಂಡಿ ಇಲ್ಲದೆ ಕುಟುಂಬವಾಸಿಗಳಿಗೆ ಸಮಸ್ಯೆಯಾಗಿದ್ದು ಜೊತೆಗೆ ಕಾಲನಿಯ ಮುಂಭಾಗದಲ್ಲಿ ಹಾಗೂ ಆಯ್ದ ಭಾಗಗಳಲ್ಲಿ ಹೆಚ್ಚಿನ ಗಿಡಗಂಟೆಗಳು ಬೆಳೆದು ನಿಂತಿವೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಜೊತೆಗೆ ವಿಷಜಂತುಗಳ ಪ್ರಾಣಭಯದಲ್ಲಿ ಕಾಲನಿಯ ಜನರು ವಾಸ ಮಾಡುವಂತಾಗಿದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಗಮನಹರಿಸುವಂತೆ ಕಾಲೋನಿಯ ನಿವಾಸಿ ಆಟೋ ನವೀನ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಗಾರೆ ರಾಮು, ಗಣೇಶ್, ಕುಮಾರ್, ಕಂಬಯ್ಯ ( ಬಂಕಣ್ಣ ) ಸೇರಿದಂತೆ ಕಾಲೋನಿಯ ನಿವಾಸಿಗಳು ಹಾಜರಿದ್ದರು.










