ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆ ಅಬ್ಬರ – ಹಳ್ಳದಲ್ಲಿ ಬಿದ್ದು ರೈತನ ದಾರುಣ ಸಾವು, ವರ್ಷದಲ್ಲಿ ಐದನೇ ಬಲಿ

ಚಿಕ್ಕಮಗಳೂರು: ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿನಾಡದಲ್ಲಿ ಮತ್ತೆ ದುರಂತ ಸಂಭವಿಸಿದೆ. ಈ ವರ್ಷ  ಮಳೆಯ ಅಬ್ಬರಕ್ಕೆ ಬಲಿಯಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಚಿಕ್ಕಮಗಳೂರು ತಾಲೂಕಿನ ದೇವಗೊಂಡನಹಳ್ಳಿ ಗ್ರಾಮದಲ್ಲಿ ಎಮ್ಮೆ ಮೇಯಿಸಲು ತೆರಳಿದ್ದ ಲಕ್ಷ್ಮಣ್ ಗೌಡ (45) ಎಂಬ ರೈತ ಹಳ್ಳದಲ್ಲಿ ಬಿದ್ದು ಮೃತಪಟ್ಟಿದ್ದಾರೆ.

ನಿನ್ನೆ ಸಂಜೆಯಿಂದಲೇ ಲಕ್ಷ್ಮಣ್ ಗೌಡ ನಾಪತ್ತೆಯಾಗಿದ್ದರೆಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಇಂದು ಬೆಳಿಗ್ಗೆ ಹಳ್ಳದ ನೀರು ಇಳಿದ ನಂತರ ಅವರ ಮೃತದೇಹ ಪತ್ತೆಯಾಗಿದೆ.

ಸ್ಥಳೀಯರ ಪ್ರಕಾರ, ಭಾರೀ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಲಕ್ಷ್ಮಣ್ ಗೌಡ ಹಳ್ಳ ದಾಟುವ ವೇಳೆ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಸಾಧ್ಯತೆ ಇದೆ.

ಮೃತರಿಗಾಗಿ ಪೋಷಕರು ಹಾಗೂ ಗ್ರಾಮಸ್ಥರು ರಾತ್ರಿ ಪೂರ್ತಿ ಹುಡುಕಾಟ ನಡೆಸಿದ್ದು, ಬೆಳಿಗ್ಗೆ ದೇಹ ಪತ್ತೆಯಾದ ನಂತರ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪೋಸ್ಟ್, ನ್ಯೂಸ್ ನೆಟ್ವರ್ಕ್ ಚಿಕ್ಕಮಗಳೂರು🌧️