ಹಾಸನ: ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ಹಿಂದೆ ಇಂದಿರಾಗಾಂಧಿ, ರಾಜೀವ್‌ಗಾಂಧಿ ಹಾಗೂ ಜವಾಹರ್ ಲಾಲ್ ನೆಹರು ಅವರಿಂದಲೇ ನಿಷೇಧ ಮಾಡಲು ಆಗಲಿಲ್ಲ, ಇನ್ನು ಈಗಿನವರಿಂದ ಸಾಧ್ಯವೇ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾರ್ಮಿಕವಾಗಿ ಪ್ರಶ್ನಿಸಿದರು.
ಹಾಸನಾಂಬೆ ದರ್ಶನ ಪಡೆದ ನಂತರ ಮಾತನಾಡಿದ ಅವರು, ನಿಷೇಧ ಮಾಡುತ್ತೇವೆ ಎಂದವರಲ್ಲಿ ಕೆಲವರು ತೀರಿ ಹೋದರು, ಇನ್ನೂ ಕೆಲವರು ನಾಶವಾದರು. ಈಗ ಅದರ ಕುಡಿ ವಿಚಿತ್ರ ರಾಜಾಕಾರಣ ಬಿಟ್ಟರೆ ಏನೂ ಇಲ್ಲ ಎಂದರು.
ಸೋನಿಯಾಗಾಂಧಿ, ರಾಹುಲ್‌ಗಾಂಧಿಗೆ ಆರ್‌ಎಸ್‌ಎಸ್ ಬಗ್ಗೆ ಈ ರೀತಿ ಟೀಕೆ ಮಾಡಿದ್ರೆ ದೊಡ್ಡ ಹೀರೋ ಆಗುತ್ತೇವೆ ಅಂಥ ಹೊರಟಿದ್ದಾರೆ. ಆದರೆ ವಿಲನ್ ಆಗುತ್ತಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಆದರೆ ತನ್ನ ಮಂತ್ರಿ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವರು ಇದ್ದಾರೆ ಎಂದು ಗೇಲಿ ಮಾಡಿದರು.
ಈ ಪ್ರಯತ್ನದಿಂದ ಸರ್ಕಾರವೇ ಉಳಿಯಲ್ಲ ಎಂಬ ನಂಬಿಕೆ ನನಗೆ ಇದೆ, ಆರ್‌ಎಸ್‌ಎಸ್ ಮುಟ್ಟಿದವರು ನಾಶವಾಗಿ ಹೋಗಿದ್ದಾರೆ, ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದು ಆರ್‌ಎಸ್‌ಎಸ್ ಬ್ಯಾನ್ ಮಾಡಿದಂತಹ ಸಂದರ್ಭದಲ್ಲಿ ಅವರೇ ಸೋತು ಸುಣ್ಣ ಆಗಿ ಹೋದರು. ಈ ಪ್ರಿಯಾಂಕ್ ಖರ್ಗೆ ಕುನ್ನಿ, ಯಾವ ಲೆಕ್ಕ ಎಂದು ಟಾಂಗ್ ನೀಡಿದರು. ಹಿಂದೂ ಧರ್ಮ ಉಳಿಸುವ ವ್ಯವಸ್ಥೆಯನ್ನ ಆರ್‌ಎಸ್‌ಎಸ್ ಮಾಡುತ್ತಿದೆ. ಇಡೀ ಪ್ರಪಂಚದಲ್ಲಿ ಭಾರತೀಯ ಸಂಸ್ಕ್ರತಿ ಉನ್ನತ ಸ್ಥಾನಕ್ಕೆ ಹೋಗಿದೆ. ಆರ್‌ಎಸ್‌ಎಸ್ ಯಾರನ್ನೂ ಮತಾಂತರ ಮಾಡಲು ಹೋಗಿಲ್ಲ.
ಹರಿಪ್ರಸಾದ್ ದೊಡ್ಡನಾಯಕರಾಗಲು ಹೊರಟಿದ್ದಾರೆ ಅದು ಆಗಲ್ಲ ಎಂದ ಅವರು, ಆರ್‌ಎಸ್‌ಎಸ್ ಸೂರ್ಯನ ರೂಪದಲ್ಲಿ ಬೆಳೆದಿದೆ. ಅದನ್ನು ಟೀಕಿಸಿದರೆ ಬಹಳ ಗೌರವ ಬರುತ್ತೆ ಅಂದುಕೊಂಡಿದ್ದಾರೆ, ಆರ್‌ಎಸ್‌ಎಸ್‌ಗೆ ಉಗುಳಿದರೆ ತಮ್ಮ ಮೈಮೇಲೆ ಬೀಳುತ್ತೆ ಅನ್ನೋದು ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.
ಒಬ್ಬ ಮಂತ್ರಿನೂ ಅವರ ಜೊತೆ ಇಲ್ಲ, ಹೈಕೋರ್ಟ್ ಕೂಡ ಸೊಪ್ಪು ಹಾಕಲಿಲ್ಲ, ಚಿತ್ತಾಪುರದಲ್ಲಿ ನವೆಂಬರ್‌ನಲ್ಲಿ ಪಥಸಂಚಲನ ಮಾಡಿ ಎಂದು ಹೇಳಿದೆ, ಚಿತ್ತಾಪುರದ ವಿಷಯ ತುಂಬಾ ಸಂತೋಷ ತಂದಿದೆ, ಪ್ರತಿ ಗ್ರಾಮದಲ್ಲಿಯೂ ಆರ್‌ಎಸ್‌ಎಸ್ ಬೆಳೆಯುತ್ತಿದೆ. ಇವರು ಇದೇ ರೀತಿ ಮಾಡಿದರೆ ಎಲ್ಲರಿಗೂ ಆಕ್ರೋಶ ಬರುತ್ತೆ ಬೀದಿಗಿಳಿದು ಹೋರಾಟ ಮಾಡ್ತಾರೆ ಎಂದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ರೀತಿ ಆಗಿತ್ತು, ಉಗ್ರಪ್ಪ ಅವರಿಗೆ ವಕೀಲರಾಗಿ ಏನು ಮಾಡಬೇಕು ಗೊತ್ತಿಲ್ಲ, ಎಲ್ಲರೂ ಸಂಘ ರಿಜಿಸ್ಟ್ರಾರ್ ಮಾಡಿ ಅದರ ಆಸ್ತಿ, ಹಣವನ್ನು ಐಟಿಗೆ ನೀಡಬೇಕು. ಗೂಡ್ಸೆಗೂ ಆರ್‌ಎಸ್‌ಎಸ್‌ಗೂ ಏನು ಸಂಬಂಧವಿಲ್ಲ, ಆರ್‌ಎಸ್‌ಎಸ್‌ನ ಬಗ್ಗೆ ಟೀಕೆ ಮಾಡಿದ್ರೆ ಪ್ರಚಲಿತ ಸುದ್ದಿಯಲ್ಲಿದ್ದಾರೆ ಎಂದು ಕೆಲವರು ಪ್ರಯತ್ನ ಪಡ್ತಿದ್ದಾರೆ. ಆರ್‌ಎಸ್‌ಎಸ್ ವಿಚಾರಕ್ಕೆ ಕೈ ಹಾಕಿದವರು ಯಾರೂ ಉಳಿದಿಲ್ಲ, ಹಾಗೆಯೇ ಈ ರಾಜ್ಯ ಸರ್ಕಾರವೂ ಉಳಿಯಲ್ಲ, ಸಚಿವ ಸ್ಥಾನ ಉಳಿಸಿಕೊಳ್ಳಲು ಆರ್‌ಎಸ್ ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡುತ್ತಿದ್ದಾರೆ, ಆರ್ ಎಸ್ ಎಸ್ ಶಕ್ತಿ ಸಹಿಸದೆ ಅನಗತ್ಯ ಚರ್ಚೆ ಮಾಡುತ್ತಿದ್ದಾರೆ ಎಂದರು.
ಪ್ರತಿವರ್ಷ ಹಾಸನಾಂಬ ದೇವಿ ದರ್ಶನಕ್ಕೆ ಬರುತ್ತೇನೆ. ಈ ಬಾರಿಯೂ ಕುಟುಂಬ ಸಮೇತರಾಗಿ ಆಗಮಿಸಿ ದೇವಿ ದರ್ಶನ ಪಡೆದಿದ್ದೇನೆ. ವಿಐಪಿಗಳನ್ನು ಬಹಳ ವ್ಯವಸ್ಥಿತವಾಗಿ ಮಾಡಿದ್ದಾರೆ. ರಾಜ್ಯ ಸರ್ಕಾರ, ಕೃಷ್ಣ ಬೈರೇಗೌಡ, ಜಿಲ್ಲಾಡಳಿತ, ಎಲ್ಲಾ ಅಧಿಕಾರಿಗಳಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ. ಮುಂದೆಯೂ ಈ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಆಶಿಸಿದರು.










