ಹಾಸನ: ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಭಕ್ತರ ಕಿಲೋಮೀಟರ್ ಗಳಷ್ಟು ಉದ್ದದ ಸರದಿ ಸಾಲಿನ ಪರದಾಟ ಮುಂದುವರಿದಿದೆ. ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಗ್ಗೆಯವರೆಗೆ ಸುಮಾರು 3.70 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ತಾಯಿಯ ದರ್ಶನ ಪಡೆದಿರುವುದು ದಾಖಲೆ ಬರೆದಿದೆ.
ದರ್ಶನಕ್ಕಾಗಿ ಭಕ್ತರು ಸರಾಸರಿ 7 ರಿಂದ 9 ಗಂಟೆಗಳ ಕಾಲ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಉಂಟಾಗಿದ್ದು, ಈಗಲೂ ಭಕ್ತರ ಸಾಗರ ಹರಿದು ಬರುತ್ತಿರುವ ಕಾರಣ ದರ್ಶನದ ನಿರೀಕ್ಷಾ ಅವಧಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ 2 ರಿಂದ 3.30 ರವರೆಗೆ ಹಾಗೂ ರಾತ್ರಿ 12 ರಿಂದ ಭಾನುವಾರ ಬೆಳಗ್ಗೆ 6 ರವರೆಗೆ ದರ್ಶನ ಇರುವುದಿಲ್ಲ. ಇದೇ ರೀತಿಯಾಗಿ, ಭಾನುವಾರ ಮಧ್ಯರಾತ್ರಿ 12 ರಿಂದ ಸೋಮವಾರ ಬೆಳಗ್ಗೆ 6 ರವರೆಗೆ ಶಾಸ್ತ್ರಾನುಸಾರ ವಿಶೇಷ ಪೂಜೆ ನಡೆಯಲಿರುವುದರಿಂದ ದರ್ಶನ ನಿಲುಗಡೆಯಲ್ಲಿರುತ್ತದೆ.
ಭಕ್ತರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಪೊಲೀಸ್ ಇಲಾಖೆ ಹಾಗೂ ಆಡಳಿತವು ವಿಶೇಷ ವ್ಯವಸ್ಥೆಗಳನ್ನು ಕೈಗೊಂಡಿದ್ದು, ಮಳೆ ಸಾಧ್ಯತೆಯೂ ಇರುವ ಹಿನ್ನೆಲೆಯಲ್ಲಿ ಭಕ್ತರು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ದೇವಾಲಯಕ್ಕೆ ಆಗಮಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
👉 ಹಾಸನಾಂಬ ನವರಾತ್ರಿ ಉತ್ಸವದ ಭಾಗವಾಗಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಾಸನ ನಗರವನ್ನೇ ಧಾರ್ಮಿಕ ಉತ್ಸಾಹ ಆವರಿಸಿದೆ.










