ಹಾಸನ: ಹಾಸನಾಂಬೆ ದರ್ಶನದ ಏಳನೇ ದಿನ, ಯತೇಚ್ಛ ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಭಕ್ತರ ಧರ್ಮ ದರ್ಶನದ ಸಾಲು, 200 ಹಾಗೂ 1000 ರೂ. ಟಿಕೆಟ್ ಪಡೆದು ಶೀಘ್ರ ದರ್ಶನ ಪಡೆಯುವ ಸಾಲುಗಳು ತುಂಬಿ ತುಳುಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸುಮಾರು 8 ಕಿಮೀವರೆಗೂ ಸಾಮಾನ್ಯ ಸರತಿ ಸಾಲು ನಿಂತಿತ್ತು.200ರೂ. ಟಿಕೆಟ್ ಸಾಲು 5 ಕಿಮೀಗೂ ಅಧಿಕ ದೂರ ಇದ್ದರೆ, 1000 ರೂ. ಟಿಕೆಟ್ ಸಾವು 2ಕಿಮೀಗೂ ಅಧಿಕ ದೂರ ಬೆಳೆದಿತ್ತು. ಬಿಸಿಲು-ಮೋಡದ ವಾತಾವರಣ ನಡುವೆ ಭಕ್ತರು ನಿಧಾನಗತಿಯಲ್ಲಿ ಸಾಗಿ ದೇವಿಯ ದರ್ಶನ ಪಡೆದರು.
ಮುಂಜಾನೆಯಿಂದಲೇ ತಂಡೋಪ ತಂಡವಾಗಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು ಆಗಮಿಸಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಗಳು, ಲೋಕಾಯುಕ್ತರು, ದಾವಣಗೆರೆ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್, ಕೆ.ಆರ್.ಪೇಟೆ ಶಾಸಕ ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಎಂ.ಕೆ.ಪ್ರಾಣೇಶ್, ಮಾಜಿ ಸಚಿವ ಸಿ.ಟಿ.ರವಿ, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಪುಷ್ಪ ಅಮರನಾಥ್,ಚಿತ್ರನಟಿ ನೀತು ಮೊದಲಾದವರು ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ-ಸಿದ್ದೇಶ್ವರಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.










