ಹಾಸನ: ಬಿಜೆಪಿಯಿಂದ ಕರೆ ಬಂದಿತ್ತು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ, ಅವರು ಇವತ್ತಿನ ಪರಿಸ್ಥಿತಿಯಲ್ಲಿ ತಮ್ಮ ಭದ್ರತೆ ಕಾಪಾಡಿಕೊಳ್ಳಲು ಹೀಗೆ ಹೇಳಿರಬಹುದು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಇಂದು ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದು ನಂತರ ಮಾತನಾಡಿದ ಅವರು, ಅವತ್ತೇ ಅವರು ಹೇಳಬೇಕಿತ್ತು, ಬಂದಿದ್ದರೆ ಅವರು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ ಎಂದರು. ರಾಜಕಾರಣಿಗಳು ಎಲ್ಲಾ ಸಂದರ್ಭದಲ್ಲೂ ಸತ್ಯ ಹೇಳುತ್ತಾರೆ ಎಂದು ನೀವು ಬಯಸಬೇಡಿ, ಸಾಂದರ್ಭಿಕವಾಗಿ ಅವರು ಹೇಳಿರಬಹುದು ಎಂದು ವ್ಯಂಗ್ಯ ಆಡಿದರು.
ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯಿಸಿ, ಆರ್‌ಎಸ್‌ಎಸ್ ರಾಷ್ಟçದಲ್ಲಿ ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದಿದೆ. ಐಸಿಎಸ್ ಸಂಘಟನೆಯನ್ನ, ಮತೀಯವಾದ ಮಾಡುವವರನ್ನ, ಜಾತಿ ಜಾತಿ ಹೆಸರಲ್ಲಿ ಸಮಾಜ ಒಡೆಯುವವರನ್ನ ನಿಷೇಧಿಸಿದರೆ ಒಳ್ಳೆಯದಾಗುತ್ತೆ.
ಅದನ್ನು ಬಿಟ್ಟು ರಾಷ್ಟ್ರ ಕಟ್ಟುವ ಸಂಘಟನೆ ನಿರ್ಬಂಧಿಸಿದರೇ ಹೇಗೆ,ರಾಷ್ಟ್ರ ಕಟ್ಟುವ ಸಂಘವನ್ನ ನಿರ್ಬಂಧಿಸುವ ಮನಸ್ಥಿತಿಯನ್ನ ನೀವು ಬದಲಾಯಿಸಿಕೊಳ್ಳಿ ಎಂದು ಕಾಂಗ್ರೆಸ್‌ನವರಿಗೆ ಬುದ್ಧಿವಾದ ಹೇಳಿದರು. ಇದು ದೇಶದ್ರೋಹ ಮಾಡುವವರಿಗೆ ಅನುಕೂಲ ಆಗುತ್ತೆ, ಅವರಿಗೆ ಅನುಕೂಲ ಮಾಡಿಕೊಡಲು ಹೀಗೆ ಮಾಡುತ್ತಿದ್ದೀರಾ, ಮಲ್ಲಪ್ಪಶೆಟ್ಟಿ ಮಾಡಿದ ಮೋಸದಂತೆ ನೀವು ಮಾಡುತ್ತಿದ್ದೀರಿ, ನಗುನಗುತ್ತಾ ಇದ್ದ ಬುದ್ಧನನ್ನ ಪಿರಂಗಿ ಇಟ್ಟು ಉಡಾಯಿಸಿದಿರಲ್ಲಾ ಅದು ಯಾವ ಮನಸ್ಥಿತಿ, ಆರ್‌ಎಸ್‌ಎಸ್ ದೇಶದಲ್ಲಿ ನೈತಿಕ ಶಕ್ತಿ ಕೊಡುತ್ತದೆ, ಸಾಮಾಜಿಕ, ಜಾತಿ, ಅಸ್ಪೃಶ್ಯತೆ ಹೇಳೋದು ಅಪರಾಧ ವಾಗುತ್ತಾ ಎಂದು ಖಾರವಾಗಿ ಪ್ರಶ್ನಿಸಿದರು.
ಆರ್‌ಎಸ್‌ಎಸ್ ಸದಸ್ಯತ್ವಕ್ಕೆ ದುಡ್ಡು ಕೊಡಬೇಕಿಲ್ಲ, ನೀವು ಒಮ್ಮೆ ಶಾಖೆಗೆ ಬಂದು ನೋಡಿ, ನಂತರ ನೀವು ಅದರ ಬಗ್ಗೆ ಮಾತನಾಡಿ, ಕಾಂಗ್ರೆಸ್ ಸೇವಾದಳಕ್ಕೂ ಈಗ ನೂರು ವರ್ಷ ಅದನ್ನ ಯಾರಾದ್ರು ನೆನಪಿಸಿಕೊಳ್ತಾರೆ, ಅದನ್ನ ನೀವು ಕಾಂಗ್ರೆಸ್‌ಗೆ ಬಹುಪರಾಕ್ ಹೇಳೋದಕ್ಕೆ ಮಾಡಿಕೊಂಡ್ರಿ, ಅದನ್ನ ನೀವು ಚೇರ್ ಎತ್ತಿ ಇಟ್ಟು ಕೊಳ್ಳಲು ಬಳಸಿಕೊಂಡ್ರಿ, ಆದ್ರೆ ಆರ್‌ಎಸ್‌ಎಸ್ ಹಾಗೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ ದೇಶದ ಹಿತ ಕಾಯುವ ಕೆಲಸ ಮಾಡಿಕೊಂಡು ಬಂದಿದೆ ಎಂದು ಸಿಟಿಆರ್ ಸಮರ್ಥಿಸಿಕೊಂಡರು. ಇದೇ ವೇಳೆ ಈ ಬಾರಿಯ ಅಚ್ಚುಕಟ್ಟು ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಬಾರಿ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ಮಾಡುವ ಪ್ರಯತ್ನ ಮಾಡಿದ್ದಾರೆ.
ಆದರೆ ಧರ್ಮದರ್ಶನ ಸಾಲಿನಲ್ಲಿ ಜನ 2 ಗಂಟೆ ನಿಲ್ಲುತ್ತಿದ್ದಾರೆ, ಅದರ ಬಗ್ಗೆ ಸ್ವಲ್ಪ ಗಮನ ಕೊಡಬೇಕಿದೆ ಎಂದರು. ಒಟ್ಟಿನಲ್ಲಿ ಕಳೆದ ಬಾರಿಗಿಂತ ಅಚ್ಚುಕಟ್ಟು ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತಕ್ಕೆ, ಉಸ್ತುವಾರಿ ಸಚುವರಿಗೆ ರವಿ ಅಭಿನಂದನೆ ಸಲ್ಲಿಸಿದರು.










