ಹಾಸನ : ಹಾಸನಾಂಬ ದರ್ಶನದ ಮೊದಲ ದಿನವೇ ವರುಣನ ಅರ್ಭಟ — ಮಳೆಯ ನಡುವೆಯೇ ಭಕ್ತರ ದಂಡು

ಹಾಸನ: ಹಾಸನಾಂಬೆ ದೇವಿಯ ದರ್ಶನೋತ್ಸವದ ಮೊದಲ ದಿನವೇ ವರುಣನ ಅರ್ಭಟದಿಂದ ಹಾಸನ ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ತಡರಾತ್ರಿಯಿಂದಲೇ ಆರಂಭವಾದ ಧಾರಾಕಾರ ಮಳೆ ಸತತವಾಗಿ ಆರು ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿದಿದೆ.

ಮಳೆಯ ನಡುವೆಯೂ ದೇವಿ ದರ್ಶನಕ್ಕಾಗಿ ಸಾವಿರಾರು ಭಕ್ತರು ಸರತಿ ಸಾಲುಗಳಲ್ಲಿ ನಿಂತು ತಾಯಿ ದರ್ಶನಕ್ಕೆ ಕಾದು ನಿಂತಿದ್ದಾರೆ. ಬೆಳಿಗ್ಗೆ ಆರು ಗಂಟೆಯಿಂದ ಸಾರ್ವಜನಿಕ ದರ್ಶನ ಆರಂಭಗೊಂಡಿದ್ದು, ಮೊದಲ ದಿನವೇ ಭಕ್ತರ ದಂಡು ಹಾಸನಕ್ಕೆ ಹರಿದು ಬಂದಿದೆ.

ಈ ವರ್ಷದಿಂದ ಜಿಲ್ಲಾಡಳಿತವು ದರ್ಶನ ವ್ಯವಸ್ಥೆಯಲ್ಲಿ ಹಲವು ಮಹತ್ತರ ಬದಲಾವಣೆಗಳನ್ನು ತಂದಿದೆ. ಹತ್ತಾರು ವರ್ಷಗಳಿಂದ ಪ್ರಚಲಿತದಲ್ಲಿದ್ದ ವಿಐಪಿ ಮತ್ತು ವಿವಿಐಪಿ ಪಾಸ್‌ಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಅದರ ಬದಲಿಗೆ ಹೊಸದಾಗಿ “ಗೋಲ್ಡ್ ಪಾಸ್” ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಕೇವಲ ಮಾಜಿ ಶಾಸಕರು, ಉನ್ನತ ಅಧಿಕಾರಿಗಳು ಹಾಗೂ ಕೆಲವು ಗಣ್ಯರಿಗೆ ಮಾತ್ರ ನೀಡಲಾಗಿದೆ.

ಒಬ್ಬರಿಗೆ ಒಂದು ಪಾಸ್‌ ನೀಡಲಾಗುತ್ತಿದ್ದು, ಪಾಸ್‌ನಲ್ಲಿ ದಿನಾಂಕ ಹಾಗೂ ಸಮಯ ನಿಗದಿಪಡಿಸಲಾಗಿದೆ. ದಿನಕ್ಕೆ ಕೇವಲ 1000 ಗೋಲ್ಡ್ ಪಾಸ್‌ಗಳು ಮಾತ್ರ ವಿತರಣೆಗೊಳ್ಳುತ್ತವೆ. ಬೆಳಿಗ್ಗೆ 7ರಿಂದ 10 ಗಂಟೆಯವರೆಗೆ ಗೋಲ್ಡ್ ಪಾಸ್‌ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನಂತರ ಬರುವವರಿಗೆ ದರ್ಶನಕ್ಕೆ ಅವಕಾಶವಿಲ್ಲ.

ಇದೆ ವೇಳೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರ ವರೆಗೆ ಪೂರ್ವ ಮಾಹಿತಿ ನೀಡಿ ಆಗಮಿಸುವ ಗಣ್ಯರಿಗೆ ಮಾತ್ರ ಶಿಷ್ಟಾಚಾರದ ಅಡಿ ಬರುವ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಳೆಯ ತೀವ್ರತೆಗೆ ಆಡಳಿತ ಸಿಬ್ಬಂದಿ ಹಾಗೂ ಭಕ್ತರಿಗೂ ತೊಂದರೆ ಉಂಟಾಗಿದ್ದು, ಹಲವರು ಕರ್ತವ್ಯ ಸ್ಥಳಗಳಿಗೆ ತಲುಪುವಲ್ಲಿ ಅಡಚಣೆ ಅನುಭವಿಸಿದ್ದಾರೆ. ಹಾಸನ, ಹೊಳೆನರಸೀಪುರ, ಬೇಲೂರು, ಅರಕಲಗೂಡು ಹಾಗೂ ಸಕಲೇಶಪುರ ಭಾಗಗಳಲ್ಲಿ ಸಹ ವರುಣನ ಅರ್ಭಟ ಮುಂದುವರಿದಿದೆ.

– ಕನ್ನಡಪೋಸ್ಟ್ ನ್ಯೂಸ್ ನೆಟ್ವರ್ಕ್, ಹಾಸನ