ಅರಕಲಗೂಡು: ತಾಲ್ಲೂಕಿನ ರಾಮನಾಥಪುರದ ತಂಬಾಕು
ಹರಾಜು ಮಾರುಕಟ್ಟೆಯಲ್ಲೂ ದಹಿಸಿ ಗ್ರೇಡ್ ಮಾಡಿದ ತಂಬಾಕು ಮಾರಾಟ ಪ್ರಕ್ರಿಯೆ ಆರಂಭವಾಗಿದ್ದು, ಸಂಸದ ಶ್ರೇಯಸ್ ಎಂ.ಪಟೇಲ್ ಪ್ರಾರಂಭೋತ್ಸವದಲ್ಲಿ ಭಾಗಿಯಾಗಿದ್ದರು.
ನಂತರ ಮಾತನಾಡಿದ ಅವರು, ಇಂದಿನಿಂದ ತಂಬಾಕು ಹರಾಜು ಪ್ರಕ್ರಿಯೆ ಆರಂಭವಾಗಿದೆ. ನಮ್ಮ ರೈತರು ವರುಣನ ಅವಕೃಪೆ, ಹಲವು ರೋಗ-ರುಜಿನಗಳ ಬಾಧೆ ನಡುವೆಯೂ ಕಷ್ಟಪಟ್ಟು ತಂಬಾಕು ಬೆಳೆದು ಅದನ್ನು ಅಣಿಗೊಳಿಸಿ ಮಾರಾಟಕ್ಕೆ ತಂದಿದ್ದಾರೆ. ಅನ್ನದಾತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ಒಳ್ಳೆಯ ಬೆಲೆ ಕಲ್ಪಿಸುವ ಮೂಲಕ ಬೆಳೆಗಾರರಿಗೆ ನೆರವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾರುಕಟ್ಟೆಗೆ ಬರುವ ರೈತರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ವಿಶ್ರಾಂತಿ ಕೊಠಡಿ, ಗುಣಮಟ್ಟದ ಆಹಾರ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಒದಗಿಸಿಕೊಡಲು ಮುತುವರ್ಜಿ ವಹಿಸಬೇಕು.
ಇದೇ ವೇಳೆ ಆರೋಗ್ಯಯುತ ಆಹಾರ ತಯಾರಿಸುವ ಹೋಟೆಲ್‌ಗಳಿಗೆ ಮಾತ್ರ ತಂಬಾಕು ಮಂಡಳಿಯ ಎದುರು ಹೋಟೆಲ್ ತೆರೆಯುವಂತೆ ನಿರ್ದೇಶನ ನೀಡಿದರು.
ತಂಬಾಕು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದೆ ಎಂಬ ಅರೋಪ ಕೇಳಿ ಬರುತ್ತಿದ್ದು, ಅದಕ್ಕೆ ಅವಕಾಶ ಮಾಡಿಕೊಡಬಾರದು. ರೈತ ಸಂಘದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ತಂಬಾಕು ಮಂಡಳಿ ಸ್ಥಳೀಯ ಅಧೀಕ್ಷಕರಿಗೆ ಸೂಚನೆ ನೀಡಿದರು.










