ಹಾಸನ: ಹಾಸನ ಜಿಲ್ಲೆಯ ಮಗ್ಗೆ ಹೊಸಮಠ ಗ್ರಾಮದಲ್ಲಿ 25ವರ್ಷಗಳಿಂದ ನಡೆಯುತ್ತಿರುವ ಕಲ್ಲುಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಲು ಹಾಗೂ ಗ್ರಾಮಸ್ಥರ ಸುರಕ್ಷತೆ ಕಾಪಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾ ಘಟಕ ಆಗ್ರಹಿಸಿದೆ.
ಜಿಲ್ಲಾಧಿಕಾರಿಗೆ ಸಲ್ಲಿಸಿದ ದೂರು ಪತ್ರದಲ್ಲಿ, ಗಣಿಗಾರಿಕೆಯಲ್ಲಿ ಇತ್ತೀಚೆಗೆ ಡೈನಾಮೇಟ್ ಬಳಸಿ ಕಲ್ಲು ಒಡೆಯುತ್ತಿರುವುದು ಕಾನೂನು ಬಾಹಿರವಾಗಿದ್ದು, ಸ್ಫೋಟದ ಪರಿಣಾಮ ಗ್ರಾಮದಲ್ಲಿನ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಚಿಕ್ಕಚಿಕ್ಕ ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಗಣಿಗಾರಿಕೆಯ ಮಾಲೀಕರು ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸುವ ಬದಲು ಗ್ರಾಮಸ್ಥರನ್ನು ಜಾತಿ ಆಧಾರಿತ ಅಟ್ರಾಸಿಟಿ ಪ್ರಕರಣ ಹಾಕುವುದಾಗಿ ಬೆದರಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. “ಇಂತಹ ಬೆದರಿಕೆ ಸಮಾಜವನ್ನು ಕದಡುವ ಕೆಲಸವಾಗಿದ್ದು, ಜಿಲ್ಲೆಯಲ್ಲಿ ಜಾತಿ ಆಧಾರಿತ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದೆ. ಪರಿಸ್ಥಿತಿ ಮುಂದುವರೆದರೆ ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದು ಮಹಾಸಭಾ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ನವಿಲೇ ಪರಮೇಶ್,ಪ್ರಧಾನ ಕಾರ್ಯದರ್ಶಿ ರವಿಕುಮಾರ್,ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್,ಆಲೂರು ತಾಲೂಕು ಅಧ್ಯಕ್ಷ ಚಿಕ್ಕ ಕಣಗಾಲ್ ಅಜಿತ್,ಯುವ ಘಟಕದ ಜಿಲ್ಲಾಧ್ಯಕ್ಷ ಅವಿನಾಶ್ ಜಿ.ಎಸ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕೆ.ಕೆ,ಖಜಾಂಚಿ ಮನೋಜ್,ಜಿಲ್ಲಾ ಕಾರ್ಯದರ್ಶಿ ಶೈಲಾಮೋಹನ್ ಬೇಲೂರು,ಮಹಿಳಾ ಘಟಕದ ಅಧ್ಯಕ್ಷೆ ವಿಂಪು ಸಂತೋಷ್,ಜಿಲ್ಲಾ ನಿರ್ದೇಶಕಿ ಸವಿತಾ,ಜಿಲ್ಲಾ ನಿರ್ದೇಶಕಿ ಅಕ್ಷತಾ ಕೊಡಗಲವಾಡಿ,ನಿಕಟಪೂರ್ವ ಜಿಲ್ಲಾಧ್ಯಕ್ಷೆ ಅರ್ಚನಾ ಜಯಂತ್,ಜಿಲ್ಲಾ ನಿರ್ದೇಶಕರು ವಿಜಯಕುಮಾರ್, ಸುರೇಶ್ ಕುಮಾರ್, ರಾಜು,ರಾಜ್ಯ ಘಟಕದ ನಿರ್ದೇಶಕಿ ನಾಗರತ್ನ ಸೇರಿದಂತೆ ಸಮಾಜದ ಮುಖಂಡರು ಹಾಗೂ ಹಲವಾರು ಕಾರ್ಯಕರ್ತರು ಹಾಜರಿದ್ದರು.










