ಹಾಸನ: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಸೆ.23 ರಂದು ಹತ್ತನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಭವ್ಯವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,2016 ರಿಂದ ಭಾರತ ಸರ್ಕಾರದ ಆಯುಷ್ ಸಚಿವಾಲಯ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯನ್ನು ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಎಂದು ಆಚರಿಸಲು ನಿರ್ಧರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರೂ ಪ್ರತಿ ವರ್ಷ ಸೆ.23ನ್ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಎಂದು ಆಚರಿಸಬೇಕೆಂದು ಘೋಷಿಸಿದ್ದಾರೆ ಎಂದರು.
ಜನರಿಗಾಗಿ ಮತ್ತು ಭೂಗ್ರಹಕ್ಕಾಗಿ ಆಯುರ್ವೇದ ಈ ಘೋಷವಾಕ್ಯದ ಮೂಲಕ ಆಯುರ್ವೇದವನ್ನು ಜನ ಜೀವನದಲ್ಲಿ ಅಳವಡಿಸಿಕೊಂಡರೆ ವೈಯಕ್ತಿಕ ಆರೋಗ್ಯ ಸುಧಾರಣೆ ಮಾತ್ರವಲ್ಲದೆ ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ ವೃದ್ಧಿ ಮುಂತಾದ ವಿಶ್ವಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂಬ ಸಂದೇಶ ಸಾರಲಾಗುತ್ತಿದೆ ಎಂದು ವಿವರಿಸಿದರು.
ಈ ಬಾರಿ ಹತ್ತನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ, ವಿಭಿನ್ನ ಚಟುವಟಿಕೆಗಳ ಮೂಲಕ ಆಚರಿಸಲಾಗುತ್ತಿದೆ. ಸೆ.12 ರಿಂದಲೇ ಪ್ರಾರಂಭವಾಗಿರುವ 20ಕ್ಕೂ ಹೆಚ್ಚು ಚಟುವಟಿಕೆ ತಿಂಗಳ ಕೊನೆವರೆಗೂ ನಡೆಯುತ್ತಿವೆ.
ಯೋಗ ತರಬೇತಿ ಶಿಬಿರ, ವಿದ್ಯಾರ್ಥಿಗಳಿಗಾಗಿ ಆರೋಗ್ಯಕರ ಜೀವನಶೈಲಿ ಕುರಿತು ಪ್ರಾಯೋಗಿಕ ತರಬೇತಿ, ಆಯುರ್ವೇದ ಆಹಾರ ತಯಾರಿಕೆ, ಸಾಂಪ್ರದಾಯಿಕ ಹಾಗೂ ಪೌಷ್ಟಿಕ ಆಹಾರಗಳ ಪರಿಚಯ, ಪ್ರಾತ್ಯಕ್ಷಿಕೆ, ವಿವಿಧ ಚಿಕಿತ್ಸಾ ಕ್ರಮಗಳ ನೇರ ಪ್ರದರ್ಶನ, ವಿಶೇಷ ಉಪನ್ಯಾಸ, ಆಯುರ್ವೇದ ತಜ್ಞರಿಂದ ಉಪಯುಕ್ತ ವಿಷಯಗಳ ಬಗ್ಗೆ ಉಪನ್ಯಾಸ, ಭಿತ್ತಿಪತ್ರ ಸ್ಪರ್ಧೆ, ವಿದ್ಯಾರ್ಥಿಗಳ ಸೃಜನಶೀಲತೆ ಉತ್ತೇಜಿಸುವ ಸಾಂಸ್ಕೃತಿಕ ಚಟುವಟಿಕೆ, ವಸ್ತು ಪ್ರದರ್ಶನ ಸೆ.12 ರಿಂದ 23 ರವರೆಗೆ ಆಯುರ್ವೇದದ ಉಪಯುಕ್ತ ಅಂಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ವಿಶಾಲ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಎಸ್.ಡಿ.ಎಂ.ಆಯುರ್ವೇದ ಆಸ್ಪತ್ರೆ ಕಟ್ಟಡ ಮುಂಭಾಗ ಬೆಳಿಗ್ಗೆ9ರಿಂದ ಸಂಜೆ5 ರವರೆಗೆ ಸೆ.13-23ರ ವರೆಗೂ ಲಭ್ಯವಿದೆ. ಇದಲ್ಲದೆ ಸಂಸ್ಥೆಯ ಯುವ ಸಂಶೋಧಕರು ಹಾಗೂ ಅನುಭವಿ ವೈದ್ಯರಿಂದ ಒಟ್ಟು 50ಆರೋಗ್ಯ ಲೇಖನ ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರತಿದಿನ ಪ್ರಕಟವಾಗುತ್ತಿವೆ.
ನಗರದ ಸುತ್ತಮುತ್ತಲಿನ ಶಂಕರನಹಳ್ಳಿ, ಕೋರವಂಗಲ, ದೇವೇಗೌಡನಗರ ಗ್ರಾಮಗಳಲ್ಲಿ ಸಂಸ್ಥೆಯ ವೈದ್ಯರು ತೆರಳಿ ಆರೋಗ್ಯ ಸಭೆ ನಡೆಸುತ್ತಿದ್ದಾರೆ. ಗ್ರಾಮಸ್ಥರಿಗೆ ಆಯುರ್ವೇದದ ಸರಳ ಆರೋಗ್ಯ ಸೂತ್ರಗಳ ಪರಿಚಯ, ಶಾಲಾ ಮಕ್ಕಳೊಂದಿಗೆ ಆರೋಗ್ಯ ಸಂವಾದ ಗ್ರಾಮಮಟ್ಟದ ಜಾಗೃತಿ ಕಾರ್ಯಕ್ರಮಗಳು ಜನಸಾಮಾನ್ಯರಿಂದ ಉತ್ತಮ ಸ್ವೀಕಾರ ಪಡೆದಿವೆ ಎಂದು ತಿಳಿಸಿದರು.
ಉಚಿತ ಆರೋಗ್ಯ ತಪಾಸಣೆ ಮತ್ತು ಶಿಬಿರ ಸೆ28 ರಂದು ಬೆಳಿಗ್ಗೆ 10 ರಿಂದ ಸಂಜೆ4ರ ವರೆಗೂ ನಮ್ಮ ಆಸ್ಪತ್ರೆಯಲ್ಲಿ ನಡೆಯಲಿದೆ. ಇದಲ್ಲದೆ ಸೆ30 ರವರೆಗೆ ಆಸ್ಪತ್ರೆಯ ವಾರ್ಡ್ ದರದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕ, ಉಪಪ್ರಾಂಶುಪಾಲ ಡಾ.ಎಂ. ಅಶ್ವಿನಿಕುಮಾರ್, ಡಾ. ಚೇತನ್, ಡಾ. ಗುರು ಬಸವರಾಜು ಯಲಗಚ್ಚಿನ ಇದ್ದರು.










